ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗುವಂತಹ ಅದ್ಭುತ ಸಾಧನೆ ಮಾಡಿದ್ದಾರೆ. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅವರು, ಏಕಕಾಲಕ್ಕೆ ಎರಡು ಪ್ರಮುಖ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಮನ್, ಕೇವಲ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 71 ರನ್ ಚಚ್ಚಿದರು. ಇದು ಡಬ್ಲ್ಯೂಪಿಎಲ್‌ನಲ್ಲಿ ಹರ್ಮನ್ ಸಿಡಿಸಿದ 10ನೇ ಅರ್ಧಶತಕ. ಇದರೊಂದಿಗೆ, ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ್ದ ನ್ಯಾಟ್ ಸೀವರ್ ಬ್ರಂಟ್ (09 ಫಿಫ್ಟಿ) ಅವರ ದಾಖಲೆಯನ್ನು ಕೌರ್ ಹಿಂದಿಕ್ಕಿದ್ದಾರೆ.
ಕೇವಲ ಅರ್ಧಶತಕ ಮಾತ್ರವಲ್ಲದೆ, ಹರ್ಮನ್ ಪ್ರೀತ್ ಕೌರ್ WPLನಲ್ಲಿ 1000 ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಾರೆ ಈ ಮೈಲಿಗಲ್ಲು ತಲುಪಿದ ಎರಡನೇ ಆಟಗಾರ್ತಿ ಇವರಾಗಿದ್ದು, ನ್ಯಾಟ್ ಸೀವರ್ ಬ್ರಂಟ್ (1101 ರನ್) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹರ್ಮನ್ ಸದ್ಯ 1016 ರನ್ ಗಳಿಸುವ ಮೂಲಕ ರನ್ ಶಿಖರ ಏರುತ್ತಿದ್ದಾರೆ.
ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದು ತಂಡಕ್ಕೆ ಆಸರೆಯಾದ ಹರ್ಮನ್, ತಮ್ಮ ಬ್ಯಾಟಿಂಗ್ ಅಬ್ಬರದ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಮೊತ್ತ ತಂದುಕೊಡುವಲ್ಲಿ ಯಶಸ್ವಿಯಾದರು. 31 ಪಂದ್ಯಗಳಿಂದ ಈ ಸಾಧನೆ ಮಾಡಿರುವ ಹರ್ಮನ್, ಮಹಿಳಾ ಕ್ರಿಕೆಟ್‌ನ ‘ಹಿಟ್ ವುಮನ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.


