ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಗೆ ಪಾಕಿಸ್ತಾನದ ಜೊತೆ ಲಿಂಕ್ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪಾಕಿಸ್ತಾನದಲ್ಲಿಯೂ ಹಲವು ಗೆಳೆಯರನ್ನು ಹೊಂದಿರುವ ಬಗ್ಗೆ ಇದಾಗಲೇ ಆರಂಭಿಕ ತನಿಖೆಯಿಂದಲೂ ತಿಳಿದುಬಂದಿದೆ.
ಕಳೆದ ವರ್ಷ ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಇಫ್ತಾರ್ ಔತಣಕೂಟದಲ್ಲಿ ಈಕೆ ಭಾಗವಹಿಸಿದ್ದ ವಿಚಾರವೂ ಇದೀಗ ಬೆಳಕಿಗೆ ಬಂದಿದೆ. ಇಫ್ತಾರ್ ಕೂಟದಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈಕೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದಳು.
ಇದೀಗ, ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ಜ್ಯೋತಿ ತನಿಖೆಯ ಸಂದರ್ಭದಲ್ಲಿ ಹಲವು ವಿಷಯಗಳನ್ನು ಆಕೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾಗಿ ಈಕೆ ಒಪ್ಪಿಕೊಂಡಿದ್ದಾಳೆ ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.
ಜ್ಯೋತಿ ಮಲ್ಹೋತ್ರಾ ವಿಚಾರಣೆಯ ಸಮಯದಲ್ಲಿ ಪಾಕಿಸ್ತಾನಿ ಪ್ರಜೆ ಮತ್ತು ಹೈಕಮಿಷನ್‌ನ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಜೊತೆ ನವೆಂಬರ್ 2023 ರಿಂದ ಮಾರ್ಚ್ 2025 ರವರೆಗೆ ಸಂಪರ್ಕದಲ್ಲಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇಷ್ಟೇ ಅಲ್ಲದೇ ಡ್ಯಾನಿಶ್, ಜ್ಯೋತಿಯನ್ನು ಪಾಕಿಸ್ತಾನದ ಪರ, ಭಾರತದ ವಿರುದ್ಧ ಗುಪ್ತಚರ ಆಸ್ತಿಯನ್ನಾಗಿ ಮಾಡಿಕೊಂಡಿದ್ದ. ಈ ನಿಟ್ಟಿನಲ್ಲಿ ಆಕೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಳು ಎಂದಿದ್ದಾರೆ ಅಧಿಕಾರಿಗಳು.
ಡ್ಯಾನಿಶ್ ಜೊತೆ ನೇರ ಸಂವಹನ ನಡೆಸಿರುವುದಾಗಿ ಜ್ಯೋತಿ ಒಪ್ಪಿಕೊಂಡಿದ್ದಾಳೆ. ಜೊತೆಗೆ ತಮ್ಮಂತೆಯೇ ಇರುವ ಹಲವು ಇತರ ಯೂಟ್ಯೂಬ್ ಪ್ರಭಾವಿಗಳೊಂದಿಗೆ ಆಕೆ ಸಂಪರ್ಕದಲ್ಲಿದ್ದಳು. ಆಕೆಯ ಮೂರು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ಜೊತೆಗೆ ಹರಿಯಾಣ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (HSGMC) ಐಟಿ ಉಸ್ತುವಾರಿ ಹೊಂದಿರುವ ಹರ್ಕಿರತ್ ಸಿಂಗ್ ಅವರಿಗೆ ಸೇರಿದ ಎರಡು ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
ತನಿಖೆಯ ವೇಳೆ ಜ್ಯೋತಿಗೆ ಹಲವು ಬ್ಯಾಂಕ್ ಖಾತೆಗಳಿವೆ ಮತ್ತು ಹಲವಾರು ವಹಿವಾಟುಗಳು ನಡೆದಿವೆ ಎನ್ನುವುದು ಬಯಲಾಗಿದ್ದು, ಹಣಕಾಸಿನ ಡೇಟಾವನ್ನು ವಿಶ್ಲೇಷಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ, ಚೀನಾ, ದುಬೈ, ಥೈಲ್ಯಾಂಡ್, ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಿಗೆ ಜ್ಯೋತಿ ಪ್ರಯಾಣಿಸಿರುವುದು ಬೆಳಕಿಗೆ ಬಂದಿದೆ. ಆದರೆ ಹೆಚ್ಚು ಹೋಗಿರುವುದು ಪಾಕಿಸ್ತಾನಕ್ಕೆ ಎನ್ನುವುದು ತಿಳಿದಿದೆ.