ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರುಶನ ಭಾಗ್ಯ ಕರುಣಿಸುವ ಹಾಸನಾಂಬೆಯ ಜಾತ್ರೋತ್ಸವದ ಸಂಭ್ರಮ ಕಳೆಕಟ್ಟಿದೆ. ನಿನ್ನೆ ದೇವಸ್ಥಾನದ ಬಾಗಿಲು ತೆರೆದಿದ್ದು, ಇಂದಿನಿಂದ ಸಾರ್ವಜನಿಕ ದರುಶನಕ್ಕೆ ಮುಕ್ತ ಅವಕಾಶ ಸಿಗಲಿದೆ. ಇಂದಿನಿಂದ 12ದಿನಗಳ ಕಾಲ ಅಮ್ಮನವರು ದರುಶನ ಭಾಗ್ಯ ಕರುಣಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ.
ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿಕೊಂಡಿದ್ದು, ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನ ಬಗೆಬಗೆಯ ಹೂಗಳಿಂದ ಸಿಂಗಾರಗೊಂಡಿದೆ. ಕಣ್ಣಾಯಿಸಿದಷ್ಟೂ ವಿದ್ಯುತ್ ದೀಪಾಲಂಕಾರಗಳು ಜಾತ್ರೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.
ಉಚಿತ ಬಸ್ ಪ್ರಯಾಣ ಸೌಕರ್ಯ ಇರುವುದರಿಂದ ಈ ಬಾರಿ ಹೆಚ್ಚಿನ ಭಕ್ತರು ಬರುವ ಸಾಧ್ಯತೆಯಿದೆ. ಈಗಾಗಲೇ ದರುಶನಕ್ಕೆ ಸಕಲ ವ್ಯವಸ್ಥೆ ಆಗಿದ್ದು, ಹತ್ತು ಕಿಮೀ ವರೆಗೂ ಬ್ಯಾರಿಕೇಡ್ ಅಳವಡಿಸಲಾಗಿದೆ. ವಿಐಪಿ,ವಿವಿಐಪಿ, ವಿಶೇಷ ದರುಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಾಣಿಕೆ ಅರ್ಪಿಸಲು ನೂಕುನುಗ್ಗಲು ಉಂಟಾಗದಿರಲು ಕ್ಯೂಆರ್ ಕೋಡ್, ಇ ಹುಂಡಿ ಕೂಡ ಸ್ಥಾಪಿಸಲಾಗಿದೆ.