February 25, 2026
Wednesday, February 25, 2026
spot_img

ಸರ್ಕಾರಕ್ಕೆ ಭಾರವಾಯಿತೇ ಗ್ಯಾರೆಂಟಿ ಯೋಜನೆಗಳು? ಸಿಎಂ ಸಿದ್ದರಾಮಯ್ಯ ಏನಂದ್ರು?

ಹೊಸದಿಗಂತ ವರದಿ, ಕಾರ್ಕಳ :

ಗ್ಯಾರೆಂಟಿ ಯೋಜನೆಗಳು ಸರ್ಕಾರಕ್ಕೆ ಭಾರವಾಗಿವೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಷಕ್ಕೆ ಸುಮಾರು 52 ಸಾವಿರ ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಅದನ್ನು ಭಾರವೆಂದು ಹೇಳಿರಬಹುದು. ಆದರೆ ಸರ್ಕಾರ ಅಭಿವೃದ್ಧಿ ಹಾಗೂ ಗ್ಯಾರೆಂಟಿ ಯೋಜನೆ ಎರಡನ್ನೂ ಸಮಾನವಾಗಿ ಮುಂದುವರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ಬುಧವಾರ ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆನೆ, ಹುಲಿ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜನ ವಸತಿ ಪ್ರದೇಶಗಳಿಗೆ ಅವುಗಳ ಪ್ರವೇಶಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

ಇದರಿಂದ ಮಾನವ ವನ್ಯಜೀವಿ ಸಂಘರ್ಷಗಳು ಹೆಚ್ಚುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕಾಡಿನ ಅಂಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೆಡ್ ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಗಾಂಜಾ ಮತ್ತು ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ಕುರಿತು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಘಟನೆಗಳನ್ನು ಉಲ್ಲೇಖಿಸಿದ ಸಿಎಂ, ಡ್ರಗ್ಸ್ ಸಮಸ್ಯೆಯನ್ನು ಸಂಪೂರ್ಣ ಶೂನ್ಯ ಮಟ್ಟಕ್ಕೆ ತರುವುದು ಸರ್ಕಾರದ ಗುರಿಯಾಗಿದೆ ಎಂದರು. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.


ಉಡುಪಿಯ ವಿಶ್ವವಿದ್ಯಾಲಯ ಒಂದರಲ್ಲಿ ಎಬಿವಿಪಿ ಕಾರ್ಯಕರ್ತರಿಂದ ನಡೆದ ದಾಳಿ ಪ್ರಕರಣದ ಕುರಿತು ಮಾತನಾಡಿದ ಸಿಎಂ, ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು. ಎಬಿವಿಪಿ ಅಥವಾ ಬೇರೆ ಯಾವುದೇ ಸಂಘಟನೆಗಳಾದರೂ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿನಾಕಾರಣ ಗಲಾಟೆ ಸೃಷ್ಟಿಸುವವರನ್ನು ಸಹಿಸಲಾಗುವುದಿಲ್ಲ ಎಂದರು.

ಆಗುಂಬೆ ಸುರಂಗ ಮಾರ್ಗ ಯೋಜನೆ ಕುರಿತು ಮಾತನಾಡಿದ ಸಿಎಂ, ಈ ಯೋಜನೆಯನ್ನು ಸರ್ಕಾರ ಜಾರಿಗೆ ತರುವುದಾಗಿ ತಿಳಿಸಿದರು. ಪರಿಸರವಾದಿಗಳ ಆತಂಕಗಳನ್ನು ಮನವರಿಕೆ ಮಾಡಿಕೊಂಡು ಅವರೊಂದಿಗೆ ಸಂವಾದ ನಡೆಸಲಾಗುವುದು. ಅವರ ವಿರೋಧದ ಕಾರಣಗಳನ್ನು ತಿಳಿದು ಸಮನ್ವಯದಿಂದ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.

ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿ, ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಥಮ ಬಾರಿ ಶಾಸಕರಾದವರು ಮಂತ್ರಿಯಾಗಬೇಕು ಎನ್ನುವ ಆಸೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಸೆ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಮೊದಲ ಬಾರಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಬಾರದು ಎಂಬ ನಿರ್ಣಯ ಕೈಗೊಂಡಿದ್ದೇವೆ ಎಂದು ಹೇಳಿದರು. ಹೈಕಮಾಂಡ್ ಸೂಚನೆಗಳನ್ನು ಪಾಲಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಯಾವುದೇ ಆಸ್ಪತ್ರೆಯಲ್ಲಿ ಸಮಸ್ಯೆ ಇಲ್ಲ.ಕಾರ್ಕಳ ನರ್ಸಿಂಗ್ ಕಾಲೇಜು ಅವಸ್ಥೆಯ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳ ಅಹವಾಲನ್ನು ಸ್ವೀಕರಿಸಿ, ಬಗೆಹರಿಸುವ ಬಗ್ಗೆ ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !