ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಎಲ್ಲರೂ ಜೋಗ ಜಲಪಾತ, ಸಿಗಂಧೂರು, ಕೊಡಚಾದ್ರಿಯನ್ನು ಹೊಗಳುತ್ತಾರೆ. ಆದರೆ ಅದರಷ್ಟೇ ಅಂದದ ಯಾರೂ ನೋಡಿದರ ಜಾಗವೊಂದಿದೆ. ಅದರ ಹೆಸರು ಮೃಗವಧೆ. ಈ ಜಾಗಕ್ಕೆ, ದೇವಾಲಯಕ್ಕೆ ಪುರಾಣದ ಕಥೆ ಇದೆ. ಇಲ್ಲಿ ಬಂದು ಬೇಡಿಕೊಂಡರೆ ಅಂದುಕೊಂಡದ್ದು ಆಗಿಯೇ ಆಗುತ್ತದೆ ಎನ್ನುವ ಪ್ರತೀತಿ ಇದೆ.
ತೀರ್ಥಹಳ್ಳಿ ತಾಲೂಕಿನ ಈ ಮೃಗವಧೆ ಮಲ್ಲಿಕಾರ್ಜುನ ದೇವಾಲಯವು ಹಳೆಯದ್ದು ಹಾಗೂ ಪೌರಾಣಿಕ ಹಿನ್ನೆಲೆಯುಳ್ಳದ್ದು.ಈ ದೇವಾಲಯವನ್ನು ಸುಮಾರು 1060ನೇ ಇಸವಿಯಲ್ಲಿ ಚಾಲುಕ್ಯ ಅರಸ ‘ತ್ರಿಭುವನಮಲ್ಲ’ ನಿರ್ಮಿಸಿದನು. ಇಲ್ಲಿನ ಸುಮಾರು ನಾಲ್ಕೂವರೆ ಅಡಿ ಎತ್ತರದ ಬೃಹತ್ ಆಗಮ ಲಿಂಗ ಮತ್ತು ಕಲಾಕೃತಿಗಳು ಚಾಲುಕ್ಯರ ಕಾಲದ ವೈಭವವನ್ನು ಸಾರುತ್ತವೆ.
ರಾಮಾಯಣದ ಕಾಲದಲ್ಲಿ ಸೀತಾದೇವಿಯು ಚಿನ್ನದ ಜಿಂಕೆಯನ್ನು ನೋಡಿ ಸಂತಸಪಟ್ಟು ತನಗದು ಬೇಕು ಎಂದು ಹೇಳುತ್ತಾರೆ. ಈ ಸಮಯದಲ್ಲಿ ಶ್ರೀರಾಮನು ಚಿನ್ನದ ಜಿಂಕೆಯನ್ನು ಹಿಂಬಾಲಿಸಿ ಬಾಣಬಿಡುತ್ತಾನೆ. ನೆಲಕ್ಕೆ ಬಿದ್ದ ತಕ್ಷಣ ಜಿಂಕೆ ಮಾರೀಚ ರಾಕ್ಷಸನಾಗಿ ಬದಲಾಗುತ್ತದೆ. ಶ್ರೀರಾಮನು ಮಾರೀಚನನ್ನು ಸಂಹಾರ ಮಾಡಿದ ಜಾಗ ಮೃಗವಧೆ.
ಶ್ರೀರಾಮನು ಪೂಜಿಸುತ್ತಿದ್ದ ಲಿಂಗವೇ ಇಲ್ಲಿದೆ ಎಂದು ಹೇಳಲಾಗುತ್ತದೆ. ವಧೆ ಮಾಡಿದ ನಂತರ ಶಿವಲಿಂಗವನ್ನು ಸ್ಥಾಪನೆ ಮಾಡಿ ಪೂಜೆ ಮಾಡಲಾಗಿತ್ತು, ಅದೇ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನವಾಯಿತು ಎಂದು ಹೇಳಲಾಗಿದೆ. ಇನ್ನೊಂದು ಕಥೆಯ ಪ್ರಕಾರ ಭಗವಾನ್ ಪರಶುರಾಮನು ಕಾರ್ತವೀರ್ಯಾರ್ಜುನನನ್ನು ಸಂಹರಿಸಿದ ಸ್ಥಳವೂ ಇದೇ ಎಂದು ಹೇಳಲಾಗುತ್ತದೆ.
ಇನ್ನು ಈ ದೇಗುಕದ ಮುಂಭಾಗದಲ್ಲಿ ಬ್ರಾಹ್ಮೀ ನದಿ ಹರಿಯುತ್ತದೆ. ಇದು ಬ್ರಹ್ಮನ ಕಮಲದಿಂದ ಹುಟ್ಟಿದ ಪ್ರಶಾಂತವಾದ ನದಿ. ದೇವರ ಅಭಿಷೇಕಕ್ಕೆ ಈ ನೀರನ್ನೇ ಬಳಸಲಾಗುತ್ತದೆ. ಸಣ್ಣ ತೊರೆಯ ರೀತಿ ಕಾಣುವ ಈ ಜಾಗ ಹಾಯಾಗಿ ಗಂಟೆಗಟ್ಟಲೆ ಕೂತು ಪ್ರಕೃತಿ ಸೌಂದರ್ಯವನ್ನು ಸವಿಯುವಂತಿದೆ.



