ಮಂದವಾಗಿ ಮಳೆ ಬೀಳುತ್ತಿದೆ. ಮಳೆಯಲ್ಲಿ ಕೊಡೆಹಿಡಿದುಕೊಂಡು ಹೆಜ್ಜೆಹಾಕುವಾಗ ದೂರದಲ್ಲಿರುವ ಭಟ್ಟರ ಮನೆಯ ಸೌದೆ ಒಲೆಯಿಂದ ಹೊರ ಬಂದ ಹೊಗೆಯೊಂದಿಗೆಯೇ, ಹಲಸಿನ ಹಣ್ಣಿನ ಕೊಟ್ಟೆ ಕಡುಬಿನ ಘಮ ಘಮ ಪರಿಮಳ ಊರೆಲ್ಲಾ ಪಸರಿಸಿದೆ. ಒಂದೆಡೆ ಮಳೆ…ಘಮಘಮಿಸುವ ಹಲಸಿನ ಕೊಟ್ಟಿಗೆಯ ಪರಿಮಳ…ಎಂಥಹವರ ಬಾಯಲ್ಲೂ ನೀರೂರಿಸದಿರದು…ವ್ಹಾವ್…ಚುಮು ಚುಮು ಮಳೆ ಒಂದೆಡೆ ಸುರಿಯುತ್ತಿದ್ದರೆ, ಬಿಸಿ ಬಿಸಿ ಕಡುಬಿಗೆ ದೊಡ್ಡ ಚಮಚ ಗಟ್ಟಿತುಪ್ಪ ಸೇರಿಸಿ ಸವಿಯುವ ಮಜವೇ ಬೇರೆ. ಹಾಗಾದ್ರೆ ಈ ಮಜಾ ನಿಮಗೆ ಬೇಕೇ…ಈ ರೆಸಿಪಿಯನ್ನೊಮ್ಮೆ ಓದಿ!
ಹಲವು ತೋಟಗಳಲ್ಲಿರುವ ಹಲಸಿನ ಮರಗಳಲ್ಲಿ ಹಲಸಿನ ಹಣ್ಣು ಯತೇಚ್ಛವಾಗಿ ಇನ್ನೂ ಇದೆ. ದೊಡ್ಡಗಾತ್ರದ ಹಲಸಿನ ಹಣ್ಣನ್ನು ಕೊಯ್ದುತನ್ನಿ. ಹಣ್ಣನ್ನು ಸೀಳಿ ಸೊಳೆತೆಗೆದು ಸ್ವಚ್ಛಗೊಳಿಸಿ. ಹಲಸಿನ ಬೀಜ ಬೇರ್ಪಡಿಸಿದ ನಂತರ ಸೊಳೆಗಳನ್ನು ಮಿಕ್ಸಿ ಅಥವಾ ಗ್ರೈಂಡರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನೀರು ಸೇರಿಸದೆ ರುಬ್ಬಿ. ರುಬ್ಬುವಾಗ ಏಲಕ್ಕಿ ಬಿಡಿಸಿ ಹಾಕಿಕೊಳ್ಳಿ. ನೆನೆಹಾಕಿದ ತಿಂಡಿ ಬೆಳ್ತಿಗೆಯನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ನಯವಾಗಿಸಿಕೊಳ್ಳಿ. ಚೆನ್ನಾಗಿ ನಯವಾದಾಗ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಿ. ಸಿಹಿರುಚಿಗೆ ಬೇಕಾದಷ್ಟು ಬೆಲ್ಲವನ್ನು ಸೇರಿಸಿ ಸರಿಯಾಗಿ ಮಿಶ್ರಣಮಾಡಿಕೊಳ್ಳಿ. ಇದೀಗ ಕೊಟ್ಟೆ ಕಡುಬಿನ ಹಿಟ್ಟುಸಿದ್ಧವಾಯಿತು!.
ತೋಟದಿಂದ ಕಡಿದು ಬಂತ ಬಾಳೆ ಎಲೆಯನ್ನು ತುಂಡು ಮಾಡಿ ಸ್ವಚ್ಛವಾಗಿ ತೊಳೆದು ಒರೆಸಿಟ್ಟುಕೊಳ್ಳಿ. ಬಾಳೆಯ ಎಲೆಯನ್ನು ಮಧ್ಯದಿಂದ ಸೀಳಿ ಎರಡು ಭಾಗವಾಗಿಸಿ. ನಂತರ ಸಿಲಿಂಡರ್ ಆಕಾರದಲ್ಲಿ ಸುರಳಿ ಸುತ್ತಿ ಒಂದು ಬದಿಯನ್ನು ನೂಲಿನಿಂದ ಭದ್ರವಾಗಿ ಕಟ್ಟಿ. ಈ ಕೊಟ್ಟೆಗೆ ರುಬ್ಬಿಟ್ಟುಕೊಂಡ ಹಲಸಿನ ಹಣ್ಣಿನ ಹಿಟ್ಟು ಮುಕ್ಕಾಲುಭಾಗ ಸುರಿದು ಮತ್ತೊಂದು ಬದಿಯನ್ನು ನೂಲಿನಿಂದ ಕಟ್ಟಿ. ನೋಡುವಾಗ ದೊಡ್ಡಗಾತ್ರದ ಚಾಕೋಲೇಟ್‌ನಂತೆ ಭಾಸವಾಗುತ್ತದೆ!. ಇದನ್ನು ಇಡ್ಲಿ ಅಟ್ಟಿನಳಗೆ(ಇಡ್ಲಿ ಪಾತ್ರೆ)ಯೊಳಗೆ ಇಟ್ಟು ಸೌದೆ ಒಲೆಯಲ್ಲಿ ಬೇಯಿಸಿ. ವ್ಹಾವ್…ಗಂಟೆ ಕಳೆಯುತ್ತಿದ್ದಂತೆಯೇ ಬಿಸಿ ಬಿಸಿ ಹಬೆ ಹೊರಬರಲಾರಂಭಿಸುತ್ತದೆ. ಸರಿಯಾಗಿ ಬೆಂದನಂತರ ಹೊರತೆಗೆದು ಬಿಸಿ ಬಿಸಿ ಕೊಟ್ಟೆ ಕಡುಬನ್ನು ತುಪ್ಪದ ಜೊತೆ ಸವಿಯಲು ಕೊಡಿ.!