ಹೊಸದಿಗಂತ ವರದಿ,ಕುಶಾಲನಗರ:
ಒಕ್ಕಲು ಮಾಡಿ ಪೇರಿಸಿಟ್ಟಿದ್ದ ಹುಲ್ಲಿನ ಮೆದೆಗೆ ಬೆಂಕಿ ತಗುಲಿ ಲಕ್ಷಾಂತರ ರೂ.ಮೌಲ್ಯದ ಭತ್ತದ ಹುಲ್ಲು ಭಸ್ಮಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ಹುಲುಸೆ ಗ್ರಾಮದಲ್ಲಿ ನಡೆದಿದೆ.
ಹುಲುಸೆ ಗ್ರಾಮದ ಹೆಚ್. ಈ ಶಿವಣ್ಣ ಎಂಬವರಿಗೆ ಸೇರಿದ ಭತ್ತದ ಹುಲ್ಲಿನ ಮೆದೆ ಮಧ್ಯರಾತ್ರಿಯಲ್ಲಿ ಹೊತ್ತಿ ಉರಿಯುತ್ತಿರುವುದನ್ನು ಕಣಿವೆಯ ಬ್ರಹ್ಮ ರಥೋತ್ಸವದ ಜಾತ್ರೆಗೆ ಬಂದಿದ್ದ ಜನರು ಗಮನಿಸಿದ್ದು, ತಕ್ಷಣವೇ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ.
ಕುಶಾಲನಗರದಿಂದ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಒಣ ಭತ್ತದ ಹುಲ್ಲಿನ ಮೆದೆ ಮತ್ತು ಅದಕ್ಕೆ ಅಳವಡಿಸಿದ್ದ ಬೃಹತ್ ಗಾತ್ರದ ಮರದ ದಿಮ್ಮಿಗಳು ಬೆಂಕಿಗೆ ಅಹುತಿಯಾಗಿದೆ.
ಸುಮಾರು ನಾಲ್ಕು ಎಕರೆ ಪ್ರದೇಶದ ಭತ್ತದ ಹುಲ್ಲು ಇತ್ತೆನ್ನಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕಂದಾಯ ಮತ್ತು ಕೃಷಿ ಇಲಾಖೆಗೆ ದೂರು ನೀಡಲಾಗಿದೆ.
ಹೈನುಗಾರಿಕೆಯನ್ನೇ ನಂಬಿ, ರೈತರಿಂದ ಒಣ ಭತ್ತದ ಹುಲ್ಲನ್ನು ಸಂಗ್ರಹ ಮಾಡಿದ್ದ ರೈತ ಶಿವಣ್ಣನವರಿಗೆ ಬಾರಿ ನಷ್ಟ ಉಂಟಾಗಿದ್ದು, ಸಂಬಂಧಿಸಿದ ಇಲಾಖೆಯವರು ಪರಿಹಾರ ಒದಗಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.