ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಲೂಕಿನ ಆದಿಚುಂಚನಗಿರಿ ಮಹಸಂಸ್ಥಾನ ಮಠಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ ಕ್ಷೇತ್ರಾಧಿದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳೊಂದಿಗೆ ಕೆಲ ಕಾಲ ಚರ್ಚಿಸಿ ಆಶೀರ್ವಾದ ಪಡೆದುಕೊಂಡರು.
ಕ್ಷೇತ್ರಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಠದ ವತಿಯಿಂದ ಮಂಗಳವಾದ್ಯ ಮತ್ತು ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾಕೈಂಕರ್ಯ ನೆರವೇರಿಸಿದರು.
ದೇವರ ದರ್ಶನದ ಬಳಿಕ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಹಾಗದ್ದುಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ನಂತರ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ ಎಚ್ಡಿಕೆ ಶ್ರೀಮಠದಲ್ಲಿಯೇ ಬೆಳಗಿನ ಉಪಹಾರ ಸೇವಿಸಿ, ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಈ ವೇಳೆ ಶ್ರೀಮಠದ ಸಂಪ್ರದಾಯದಂತೆ ಎಚ್ಡಿಕೆ ಅವರಿಗೆ ಶಾಲುಹೊದಿಸಿ, ಏಲಕ್ಕಿ ಹಾರ ಹಾಕಿ ಹಣ್ಣಿನ ಬುಟ್ಟಿ ಮತ್ತು ನೆನಪಿನ ಕಾಣಿಕೆ ನೀಡಿ ಶ್ರೀಗಳು ಗೌರವಿಸಿದರು.
ಆದಿಚುಂಚನಗಿರಿ ಮಠದ ಚೈತನ್ಯನಾಥಸ್ವಾಮೀಜಿ, ಮಾಜಿ ಶಾಸಕ ಸುರೇಶ್ ಗೌಡ, ಮನ್ ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಸೇರಿದಂತೆ ಹಲವು ಮುಖಂಡರು ಇದ್ದರು.