ಹೊಸದಿಗಂತ ರಾಯಚೂರು :
ಅನುಮಾನಾಸ್ಪದವಾಗಿ ಮೃತಪಟ್ಟಿರುವ ಯಾದಗಿರಿ ಪಿಎಸ್‌ಐ ಪರಶುರಾಮ ಕುಟುಂಬಕ್ಕೆ ಸಾಂತ್ವಾನ ಹಾಗೂ ಅವರ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಹೋರಾಟದ ಭರವಸೆ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ.
ನಗರದ ಐಡಿಎಸ್‌ಎಂಟಿ ಬಡಾವನೆಯಲ್ಲಿರುವ ಪರಶುರಾಮರ ಪತ್ನಿಯ ತವರು ಮನೆಗೆ ಭೇಟಿ ನೀಡಿದ್ದ ಜೆಡಿಎಸ್ ಮುಖಂಡರ ನಿಯೋಗ ಭೇಟಿ ನೀಡಿ ಮೃತ ಪಿಎಸ್‌ಐ ಪತ್ನಿ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಪರಶುರಾಮರ ಪತ್ನಿಯ ಶ್ವೆತಾ ಅವರೊಂದಿಗೆ ಮಾತನಾಡಿಸಿದ ಸಂದರ್ಭದಲ್ಲಿ ಈ ಭರವಸೆಯನ್ನು ನೀಡಿ, ಇದೇ ತಿಂಗಳು ದಿ.೧೪ ನಂತರ ರಾಯಚೂರಿಗೆ ಬಂದು ನಿಮ್ಮನ್ನು ಭೇಟಿ ಆಗುವದಾಗಿ ಕುಮಾರಸ್ವಾಮಿಯವರು ಶ್ವೇತಾ ಅವರಿಗೆ ತಿಳಿಸಿದರು.
ನಿಮಗೆ ಬಹಳ ಅನ್ಯಾಯವಾಗಿದೆ, ಘಟನೆ ಕುರಿತು ಕೇಳಿ ನನಗೂ ಬಹಳ ನೋವಾಗಿದೆ. ಸ್ವಾಭಿಮಾನದಿಂದ ಕೆಲಸ ಮಾಡುತ್ತಿದ್ದವರಿಗೆ ರಕ್ಷಣೆ ಇಲ್ಲದಂತಾಗಿದೆ. ಎಂಎಲ್‌ಎ ರಾಜಿನಾಮೆ ಕೊಡಬೇಕು, ಅವರ ಮಗನನ್ನು ಬಂಧಿಸಬೇಕು. ಇದರ ಬಗ್ಗೆ ನಾನು ಹೋರಾಟ ಮಾಡುತ್ತೇನೆ. ಇದು ಬಹಳ ಅನ್ಯಾಯ ನಾನೂ ಜವಾಬ್ದಾರಿ ತಗೋತಿದಿ ಅಂತ ಹೇಳುವ ಮೂಲಕ ಎಚ್.ಡಿ.ಕೆ ಸಾಂತ್ವಾನ ಹೇಳಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಶಿವಶಂಕರ ಮಾತನಾಡಿ, ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ. ಒಂದು ವೇಳೆ ಸರ್ಕಾರದಿಂದ ಪರಶುರಾಮ ಕುಟುಂಬಕ್ಕೆ ಅನ್ಯಾಯವಾದರೆ ಜೆಡಿಎಸ್ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ಪರಿಶಿಷ್ಟ ಪಂಗಡ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ, ಮುಖಂಡರಾದ ಬುಡ್ಡನಗೌಡ, ರಾಮಕೃಷ್ಣ, ನಾಗರಾಜ, ಹಂಪಯ್ಯ ನಾಯಕ, ಪಿ ರಾಜು, ನರಸಪ್ಪ ಆಶಾಪೂರ, ಶ್ವೇತಾರ ತಂದೆ ವೆಂಕಟಸ್ವಾಮಿ ಮತ್ತು ಕುಟುಂಬದವರಿದ್ದರು.
ಹೆಚ್.ಡಿ.ಕುಮಾರಸ್ವಾಮಿ ಸಾಂತ್ವಾನ
ನಿಮ್ಮ ಕುಟುಂಬ ಜೊತೆಗೆ ನಾವಿದ್ದೇವೆ ಧೈರ್ಯ ಕಳೆದುಕೊಳ್ಳಬೇಡಿ. ಸರ್ಕಾರದ ಮೇಲೆ ಒತ್ತಡ ತಂದು ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ. ತಮ್ಮ ಕುಟುಂಬಕ್ಕೆ ಸೂಕ್ತ ಸಹಾಯಧನವನ್ನು ಸರ್ಕಾರ ನೀಡಲು ಮತ್ತು ನಿಮ್ಮ ಮಗನ ವಿದ್ಯಾಭ್ಯಾಸಕ್ಕೆ ಸರಕಾರ ಎಲ್ಲ ವ್ಯವಸ್ಥೆ ಮಾಡಲು, ಸರ್ಕಾರ ತಮಗೆ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯಿಸುತ್ತೇನೆ. ತಾವು ಗರ್ಭಿಣಿ ಇದ್ದೀರಿ ತಮ್ಮ ಆರೋಗ್ಯದ ಕುರಿತು ನಿಗಾವಹಿಸಿ. ತಮಗೆ ಯಾವುದೇ ಅನ್ಯಾಯ ಆಗದಂತೆ ನಾನು ನೋಡಿಕೊಳ್ಳುತ್ತೇನೆ. ದಲಿತ ಜನಾಂಗಕ್ಕೆ ಸೇರಿದ ಪರಶುರಾಮ ಅವರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಹೇಳಿದರು.