ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆಗೆ ಸಜ್ಜಾಗಿದೆ.
ಈ ನಡುವೆ ಹೈದರಾಬಾದ್ನಲ್ಲಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ತಮ್ಮ ಕಷ್ಟಕಾಲದಲ್ಲಿ ನೆರವಾದ ಗೆಳೆಯನ ಬಗ್ಗೆ ಹೇಳಿಕೊಂಡಿದ್ದಾರೆ.
ನಾನು ಸಿನಿಮಾಗಳಲ್ಲಿ ಗೆಲುವಿಗಿಂತಲೂ ಸೋಲನ್ನೇ ನೋಡಿದ್ದು ಹೆಚ್ಚು. ಒಂದು ಹಂತದಲ್ಲಿ ಸತತವಾಗಿ ಸಿನಿಮಾ ಸೋತಿತ್ತು. ಗೆದ್ದಾಗ ಎಲ್ಲರೂ ಸ್ನೇಹಿತರೆ ಆದರೆ ಸೋಲಿನಲ್ಲಿ ನನ್ನನ್ನು ಹುಡುಕಿಕೊಂಡು ಬಂದಿದ್ದು ತ್ರಿವಿಕ್ರಮ್ ಶ್ರೀನಿವಾಸ್. ನಾನು ಸೋತು, ಸಿನಿಮಾ ಲೋಕದ ಯಾರೂ ನನ್ನ ಹತ್ತಿರ ಇಲ್ಲದಾಗ ನನ್ನನ್ನು ಹುಡುಕಿಕೊಂಡು ಬಂದಿದ್ದು ತ್ರಿವಿಕ್ರಮ್ ಶ್ರೀನಿವಾಸ್, ಆತ ನನ್ನ ಕಷ್ಟ ಕಾಲದ ಗೆಳೆಯ’ ಎಂದಿದ್ದಾರೆ ಪವನ್.
‘ನಾನು ಸೋತಿದ್ದಾಗ ನನಗೆ ‘ಜಲ್ಸ’ ಸಿನಿಮಾ ಮಾಡಿ ಗೆಲುವು ತಂದುಕೊಟ್ಟರು. ಆಗ ತ್ರಿವಿಕ್ರಮ್ ಶ್ರೀನಿವಾಸ್ ಯಾರೆಂದು ಸಹ ನನಗೆ ಗೊತ್ತಿರಲಿಲ್ಲ. ಆದರೆ ಅವರ ಗೆಳೆತನ ನನಗೆ ಇಷ್ಟವಾಯ್ತು. ನನ್ನ ಬಳಿ ಯಾವ ದೊಡ್ಡ ನಿರ್ದೇಶಕರೂ ಇಲ್ಲ. ನನಗೆ ಯಾವ ದೊಡ್ಡ ನಿರ್ದೇಶಕರೂ ಸಿನಿಮಾ ಮಾಡುವುದಿಲ್ಲ. ನನಗೆ ಇರುವುದು ತ್ರಿವಿಕ್ರಮ್ ಶ್ರೀನಿವಾಸ್.
‘ಜಲ್ಸಾ’ ಸಿನಿಮಾಕ್ಕೆ ಮುಂಚೆ ಪವನ್ ಕಲ್ಯಾಣ್, ‘ಬಾಲು’ ಸಿನಿಮಾ ಮಾಡಿದ್ದರು ಅದು ಸೋತಿತು. ಬಳಿಕ ‘ಬಂಗಾರಂ’ ಮಾಡಿದರು ಅದು ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು, ಬಳಿಕ ‘ಅನ್ನವರಂ’ ಮಾಡಿದರು ಅದೂ ಸಹ ಸೋತಿತು. ಅದರ ಬಳಿಕ ಬಂದ ‘ಜಲ್ಸ’ ಸಿನಿಮಾ ದೊಡ್ಡ ಹಿಟ್ ಆಯ್ತು. ಬಳಿಕ 2013 ರಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ‘ಅತ್ತಾರಿಂಟಿಕಿ ದಾರೇದಿ’ ಸಿನಿಮಾ ಮಾಡಿದರು ಅದು ಬ್ಲಾಕ್ ಬಸ್ಟರ್ ಆಯ್ತು. 2018 ರಲ್ಲಿ ತ್ರಿವಿಕ್ರಮ್ ಶ್ರೀನಿವಾಸ್, ಪವನ್ ಕಲ್ಯಾಣ್ಗಾಗಿ ‘ಅಜ್ಞಾತವಾಸಿ’ ಸಿನಿಮಾ ನಿರ್ದೇಶನ ಮಾಡಿದರು. ಆದರೆ ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು.
ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಪವನ್ ಕಲ್ಯಾಣ್ ಬಲು ಆತ್ಮೀಯ ಗೆಳೆಯರು. ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗ ಅವರಿಗೆ ಬೆಂಬಲ ನೀಡಿದ್ದ ತ್ರಿವಿಕ್ರಮ್ ಶ್ರೀನಿವಾಸ್, ಕಳೆದ ಆಂಧ್ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪವನ್ ಜೊತೆಗಿದ್ದು ಬೆಂಬಲ ನೀಡಿದ್ದರು. ತ್ರಿವಿಕ್ರಮ್ ಶ್ರೀನಿವಾಸ್ ಪ್ರಸ್ತುತ ವೆಂಕಟೇಶ್ ಅವರಿಗಾಗಿ ಒಂದು ಸಿನಿಮಾ ಹಾಗೂ ಜೂ ಎನ್ಟಿಆರ್ಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜೂ ಎನ್ಟಿಆರ್ ಅವರಿಗಾಗಿ ‘ಮುರುಗನ್’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಪೌರಾಣಿಕ ಕತೆಯನ್ನು ಆಧರಿಸಿದ ಸಿನಿಮಾ ಆಗಿದೆ.