ಹೊಸದಿಗಂತ ಡಿಜಿಟಲ್ ಡೆಸ್ಕ್: (ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ವಿಶೇಷ)
ಹತ್ತೊಂಬತ್ತನೇ ಶತಮಾನದ ಆರಂಭದ ಪ್ರಮುಖ ಆಂಧ್ರ ನಾಯಕರಲ್ಲಿ, ಉನ್ನವ ಲಕ್ಷ್ಮೀ ನಾರಾಯಣ ಎಂಬ ಹೆಸರು ಬಹಳ ಗೌರವಾನ್ವಿತ ಸ್ಥಾನವನ್ನು ಪಡೆದುಕೊಂಡಿದೆ. ಇವರು ಹುಟ್ಟಿದ್ದು ಗುಂಟೂರು ಜಿಲ್ಲೆಯಲ್ಲಿ. ಬಿ.ಎ ಮುಗಿಸಿದ ನಂತರ. ಆಂಧ್ರ ಕ್ರಿಶ್ಚಿಯನ್ ಕಾಲೇಜಿನಲ್ಲಿ LL.B ವ್ಯಾಸಂಗ ಮಾಡಿದರು ಮತ್ತು ಗುಂಟೂರಿನಲ್ಲಿ ತಮ್ಮ ಕಾನೂನು ಅಭ್ಯಾಸ ಪ್ರಾರಂಭಿಸಿದರು. 1913 ರಲ್ಲಿ ಐರ್ಲೆಂಡ್‌ಗೆ ಹೋದ ಇವರು ಡಬ್ಲಿನ್‌ನಿಂದ ಬಾರ್ ಅಟ್ ಲಾ ಪದವಿ ಪಡೆದರು. ಐರ್ಲೆಂಡ್‌ನಿಂದ ಹಿಂದಿರುಗಿದ ನಂತರ ಮದ್ರಾಸ್‌ನಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ಆ ಕಾಲದಲ್ಲಿ ವಕೀಲ ವೃತ್ತಿ ಬಹಳ ಲಾಭದಾಯಕವಾಗಿತ್ತು.
ಆದರೆ ಗಾಂಧೀಜಿಯವರ ಪ್ರಭಾವದಿಂದ ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿದ ಅವರು ರಾಷ್ಟ್ರೀಯ ಹೋರಾಟಕ್ಕೆ ಧುಮುಕಿದರು. ಅಸಹಕಾರ ಚಳುವಳಿ ಮತ್ತು ಅರಣ್ಯ ಸತ್ಯಾಗ್ರಹ (1920-1922) ಮತ್ತು ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರು. ಅನೇಕ ಸಂದರ್ಭಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದರು. 1922 ರಲ್ಲಿ ಸಮಾಜ ಸುಧಾರಣೆಯ ಸದುದ್ದೇಶದಿಂದ ಗುಂಟೂರಿನ ಬ್ರೋಡಿಪೇಟ್‌ನಲ್ಲಿ ಶಾರದಾ ನಿಕೇತನವನ್ನು ಸ್ಥಾಪಿಸಿದರು. ಈ ಸಂಸ್ಥೆಯು ಮಹಿಳೆಯರ ಉನ್ನತಿ ಮತ್ತು ಅವರ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸಿತು. ಮದ್ರಾಸ್ ಬ್ರೀಟೀಷ್ ಸರ್ಕಾರ ನಿಷೇಧ ಹೇರಿದ ʼಮಾಲಪಲ್ಲಿʼ (ಹರಿಜನ ಹಳ್ಳಿ) ಎಂಬ ಮಹಾನ್ ಕಾದಂಬರಿ ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ .
ಆಂಧ್ರ ರಾಜ್ಯ ಚಳವಳಿಯಲ್ಲಿ ಕೂಡ ಭಾಗವಹಿಸಿದ್ದ ಅವರು ಆಂಧ್ರ ಮಹಾಸಭಾದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅಲ್ಲದೇ 1922ರಲ್ಲಿ ನಡೆದ ಆಂಧ್ರ ಮಹಾಸಭಾದ ಚಿತ್ತೂರು ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹೀಗೆ ಸ್ವಾತಂತ್ರ್ಯಹೋರಾಟ, ಸಮಾಜಸುಧಾರಣೆ, ಸಮಾಜಸೇವೆಗಳಿಗೋಸ್ಕರ ಜೀವ ತೇಯ್ದು 1958 ರಲ್ಲಿ ಈ ಮಹಾನ್ ಚೇತನ ಕೊನೆಯುಸಿರೆಳೆಯಿತು.