ತ್ರಿವೇಣಿ ಗಂಗಾಧರಪ್ಪ
1861 ರಲ್ಲಿ, ಹಿಂದಿನ ಸಿಕ್ಕಿಂ ಸಾಮ್ರಾಜ್ಯ ಮತ್ತು ಬ್ರಿಟಿಷ್ ಸಾಮ್ರಾಜ್ಯವು ತುಮ್ಲಾಂಗ್ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದವು ಪರಿಣಾಮಕಾರಿಯಾಗಿ ಸಿಕ್ಕಿಂ ಅನ್ನು ತಮ್ಮ ವ್ಯಾಪ್ತಿಗೆ ತರುವಲ್ಲಿ ಟಿಬೆಟ್‌ಗೆ ವ್ಯಾಪಾರ ಮಾರ್ಗವನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ರಷ್ಯಾದ ಸಾಮ್ರಾಜ್ಯದ ವಿರುದ್ಧದ ಗ್ರೇಟ್ ಗೇಮ್ ಸಂದರ್ಭದಲ್ಲಿ, ಬ್ರಿಟಿಷ್ ವಸಾಹತುಶಾಹಿಗಳು ಈ ಪ್ರದೇಶದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಿದರು.
ಸುಮಾರು ಮೂರು ದಶಕಗಳ ನಂತರ ಬ್ರಿಟಿಷರು ಸಿಕ್ಕಿಂ ಮೇಲೆ ಔಪಚಾರಿಕ ಸಂರಕ್ಷಣಾ ಪ್ರದೇಶವನ್ನು ಸ್ಥಾಪಿಸಿದರು. ಇದನ್ನು ಚೀನೀಯರು 1890 ರ ಆಂಗ್ಲೋ-ಚೀನೀ ಒಪ್ಪಂದದಲ್ಲಿ ಗುರುತಿಸಿದರು. ಈ ಘಟನೆಗಳ ಪರಿಣಾಮವಾಗಿ ಬ್ರಿಟಿಷರು ಸಿಕ್ಕಿಂ ಸಾಮ್ರಾಜ್ಯದ ರಕ್ಷಣೆ ಮತ್ತು ಬಾಹ್ಯ ವ್ಯವಹಾರಗಳ ಜವಾಬ್ದಾರಿಯನ್ನು ವಹಿಸಿಕೊಂಡರು.
ಇಲ್ಲಿ ಬ್ರಿಟಿಷರ ಪ್ರಭಾವ ಹೆಚ್ಚುತ್ತಿರುವ ಈ ಸಂದರ್ಭದಲ್ಲಿಯೇ ತ್ರಿಲೋಚನ್ ಪೋಖ್ರೆಲ್ ಭಾರತದ ಅಸ್ತಿತ್ವ ಉಳಿಸಲು ಪಣ ತೊಟ್ಟ ನಾಯಕನಾಗಿ ಹೊರಹೊಮ್ಮಿದರು. ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸತ್ಯಾಗ್ರಹದ ಆದರ್ಶಗಳ ಮೇಲಿನ ಪ್ರೀತಿಯಿಂದ ಹುಟ್ಟಿಕೊಂಡ ‘ಗಾಂಧಿ ಪೋಖ್ರೆಲ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಪೂರ್ವ ಸಿಕ್ಕಿಂನ ಪಾಕ್ಯೊಂಗ್ ಉಪವಿಭಾಗದ ತಾರೆಥಾಂಗ್ ಪ್ರದೇಶದಲ್ಲಿ ಹುಟ್ಟಿ ಬೆಳೆದರು.
1942 ರ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಗುಜರಾತ್‌ನ ಸಬರಮತಿ ಆಶ್ರಮ ಮತ್ತು ಬಿಹಾರದ ಸರ್ವೋದಯ ಆಶ್ರಮದಲ್ಲಿ ಗಾಂಧಿಯವರೊಂದಿಗೆ ವಾಸಿಸುತ್ತಿದ್ದಾಗ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಭಾಗವಹಿಸುವಿಕೆ ಪ್ರಾರಂಭವಾಯಿತು. ಅಲ್ಲಿ ʻಚರಕಾʼ(ನೂಲುವ ಯಂತ್ರ)ವನ್ನು ಕಲಿತರು. ಆಶ್ರಮಗಳಿಗೆ ತಮ್ಮ ಸೇವೆಗಳನ್ನು ಸಲ್ಲಿಸುವುದರ ಜೊತೆಗೆ ಗಾಂಧಿಯವರ ದೈನಂದಿನ ವ್ಯವಹಾರಗಳಲ್ಲಿ ಸಹಾಯ ಮಾಡುತ್ತಾರೆ. ಗಾಂಧೀಜಿಯವರ ಬೋಧನೆ ಮತ್ತು ಅವರ ಜೀವನಶೈಲಿಯಿಂದ ಹೆಚ್ಚು ಪ್ರಭಾವಿತರಾಗಿದ್ದರು. ಗಾಂಧಿಯಂತಹ ಬಟ್ಟೆಗಳನ್ನು ಧರಿಸಿ ತಮ್ಮ ಸ್ಥಳೀಯ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು ಎಂದು ಸ್ಥಳೀಯರು ತಿಳಿಸುತ್ತಾರೆ.
ಪೋಖ್ರೆಲ್ ಬ್ರಿಟಿಷ್-ನಿರ್ಮಿತ ಸರಕುಗಳ ಬಹಿಷ್ಕಾರಕ್ಕೆ ಸ್ವದೇಶಿ ಅಥವಾ ಸ್ಥಳೀಯವಾಗಿ ತಯಾರಿಸಿದ ಸರಕುಗಳ ಪರಿಕಲ್ಪನೆಯನ್ನು ಪ್ರಚಾರ ಮಾಡಿದರು ಹತ್ತಿ ಎಳೆಗಳನ್ನು ಮಾಡಲು ತಮ್ಮ ಚರಕಾದೊಂದಿಗೆ ಕುಳಿತುಕೊಳ್ಳುತ್ತಿದ್ದರು. ಹತ್ತಿ ಧೋತಿಯ ತುಂಡು ಮತ್ತು ಮರದ ಚಪ್ಪಲಿಗಳನ್ನು ಧರಿಸುತ್ತಿದ್ದರಂತೆ. ವಂದೇ ಮಾತರಂನ ಸಂದೇಶವನ್ನು ರವಾನಿಸುತ್ತಿದ್ದರು ಮತ್ತು ಸ್ವದೇಶಿ ಆಂದೋಲನದ ಉತ್ಸಾಹವನ್ನು ಹುಟ್ಟುಹಾಕಿದರು.
ಅಧಿಕೃತ ದಾಖಲೆಗಳ ಪ್ರಕಾರ, ಅವರು 27 ಜನವರಿ 1969 ರಂದು ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಿಧನರಾದರು. ಅವರ ವಂಶಸ್ಥರು ಅಸ್ಸಾಂಗೆ ವಲಸೆ ಹೋದರು. ಅವರ ನಿಧನದ ನಂತರ ಕೇವಲ ಆರು ವರ್ಷಗಳ ಬಳಿಕ ಸಿಕ್ಕಿಂ ಭಾರತೀಯ ಒಕ್ಕೂಟದ ಅಧಿಕೃತ ರಾಜ್ಯವಾಯಿತು.