ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸ್ಯ ನಟ ಚಂದ್ರಪ್ರಭ ಅವರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ಅವರು ಚಲಿಸುತ್ತಿದ್ದ ಕಾರು ಚಿಕ್ಕಮಗಳೂರು ಬಳಿ ಮಾಲತೇಶ್ ಎಂಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ತಮ್ಮದು ಯಾವುದೇ ತಪ್ಪು ಇಲ್ಲ. ಬೈಕ್ ಸವಾರ ಮದ್ಯಪಾನ ಮಾಡಿದ್ದ ಎಂದು ಚಂದ್ರಪ್ರಭ ಈ ಮೊದಲು ಹೇಳಿಕೆ ನೀಡಿದ್ದರು. ಇದೀಗ ಅಪಘಾತಕ್ಕೆ ಒಳಗಾದ ವ್ಯಕ್ತಿ ಕುಡಿದಿದ್ದ ಎಂದು ತಪ್ಪಾಗಿ ಭಾವಿಸಿ ಹೇಳಿದ್ದೆ, ಆದರೆ ಅವರು ಕುಡಿದಿರಲಿಲ್ಲ. ಆ ಬಗ್ಗೆ ತಾವು ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಸಂಚಾರಿ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸಿದ್ದ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಚಂದ್ರಪ್ರಭ, ತಾವು ನೀಡಿದ್ದ ಮೊದಲಿನ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಬೈಕ್ ಸವಾರ ಕುಡಿದಿದ್ದ ಎಂದು ಹೇಳಿದ್ದೆ. ಆದರೆ ಆತ ನಿಜವಾಗಿಯೂ ಕುಡಿದಿರಲಿಲ್ಲ, ಆ ಬಗ್ಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಅಪಘಾತವಾದ ಯುವಕನ ಯೋಗಕ್ಷೇಮವನ್ನು ನಾನು ವಿಚಾರಿಸಬೇಕಿತ್ತು. ಆದರೆ ನಾನು ವಿಚಾರಿಸಲಿಲ್ಲ. ನನ್ನನ್ನು ಕ್ಷಮಿಸಿ. ನಾನು ಬಡವ, ಅವರು ಕೂಡ ಬಡವರು. ನಾನು ಕೂಡ ತಂದೆ ಕಳೆದುಕೊಂಡು 11 ವರ್ಷದಿಂದ ನೋವಿನಲ್ಲಿದ್ದೇನೆ. ನನಗೆ ಎಲ್ಲವೂ ಅರ್ಥವಾಗುತ್ತದೆ. ಅವರ ಕಷ್ಟಕ್ಕೆ ನಾನು ಖಂಡಿತ ನೆರವಾಗುತ್ತೇನೆ. ನನ್ನ ಕೈಯಲ್ಲಾದ ಸಹಾಯ ಮಾಡುತ್ತೇನೆ. ಮಾಲತೇಶ್ ಅವರ ಆಸ್ಪತ್ರೆ ಖರ್ಚು ನನ್ನ ಕೈಲಾದಷ್ಟು ಭರಿಸುತ್ತೇನೆ. ನಾನು ಮಾಡಿದ್ದು ತಪ್ಪು. ಗಾಯಾಳು ಮಾಲ್ತೇಶ್ ಮದ್ಯಪಾನ ಮಾಡಿರಲಿಲ್ಲ. ಈ ವಿಚಾರವಾಗಿ ನಾನು ಕಾನೂನು ಕ್ರಮಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
: ಸೆಪ್ಟೆಂಬರ್ 4ರಂದು ಮಧ್ಯರಾತ್ರಿ ಚಿಕ್ಕಮಗಳೂರು ನಗರದ ಕೆಎಸ್ಆರ್ಟಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬೈಕ್ ಸವಾರನಿಗೆ ನಟ ಚಂದ್ರಪ್ರಭ ಸಂಚರಿಸುತ್ತಿದ್ದ ಕಾರು ಡಿಕ್ಕಿಯಾಗಿತ್ತು. ಅಪಘಾತವಾದ ತಕ್ಷಣ ಅವರು ಕಾರು ನಿಲ್ಲಿಸದೇ ಹೋಗಿದ್ದರು.