ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಜಕ್ರೀಯ ಮೊಹಮ್ಮದ್ (52) ಎಂಬವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಇವರು ಠಾಣೆಯ ಬಾತ್ ರೂಂನಲ್ಲಿ ಸಾವನ್ನಪ್ಪಿದ್ದಾರೆ. ಇಂದು ಬೆಳಗಿನ ಜಾವ ಸಿಬ್ಬಂದಿ ಬಾತ್ ರೂಂಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಹುಟ್ಟೂರಾದ ದಾವಣಗೆರೆ ಜಿಲ್ಲೆಯ ಚನ್ನಗಿರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಎಸ್ಪಿ ನಿಖಿಲ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಸಂಬಂಧಿ ಆದಿಲ್ ಎಂಬವರು ಮಾತನಾಡಿ, ನಿನ್ನೆ ರಾತ್ರಿ 10 ಗಂಟೆಗೆ ಫೋನ್ ಮಾಡಿ, ಸೊಂಟ ನೋವಿದೆ ಎಂದರು. ನಾಳೆ ಆಸ್ಪತ್ರೆಗೆ ಹೋಗೋಣ ಎಂದಿದ್ದೆ. ಅದಕ್ಕೆ ಅವರು, ಆಯ್ತು ಬೆಳಗ್ಗೆ ಬಂದು ತಿಂಡಿ ತಿನ್ನಿಸು ಎಂದರು. ನಾನು ಆಯ್ತು ಅಂದಿದ್ದೆ. ಬೆಳಗ್ಗೆ 7 ಗಂಟೆಗೆ ಬರ್ತೀನಿ ಎಂದಿದ್ದೆ. ಮನೆ ಬಳಿ ನೋಡ್ಕೋ ಅಂತ ಹೇಳಿದರು. ನಾನು ಏಕೆ ಹೇಳ್ತಿದ್ದೀರಿ ಎಂದೆ. ನಾಳೆ ಬರ್ತಿಯಲ್ಲ, ಹೇಳ್ತೀನಿ ಅಂದ್ರು. ಬೆಳಗ್ಗೆ 6 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮ್ಮ ಮಾವ ಫೋನ್ ಮಾಡಿ ತಿಳಿಸಿದ್ರು. ಅವರಿಗೆ ಸ್ವಲ್ಪ ಬೆನ್ನು ನೋವು ಇತ್ತು. ಎರಡು ತಿಂಗಳಿಂದ ರಜೆಯಲ್ಲಿದ್ದರು. ಸ್ಕ್ಯಾನಿಂಗ್ ಮಾಡಿದಾಗ ಆಪರೇಷನ್ ಮಾಡಬೇಕು ಎಂದು ವೈದ್ಯರು ಹೇಳಿದ್ದರು. ನೋವಿನಿಂದ 10 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದರು. ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಡೆತ್‌ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲ ಎಂದು ತಿಳಿಸಿದರು.

