ಚಳಿಗಾಲ ಬಂತೆಂದರೆ ಮಾರುಕಟ್ಟೆಯಲ್ಲಿ ಹಸಿರು ಬಟಾಣಿ ರಾಶಿ ರಾಶಿಯಾಗಿ ಲಭ್ಯವಿರುತ್ತದೆ. ಇದನ್ನು ಸೂಪರ್‌ಫುಡ್ ಎಂದೇ ಕರೆಯಲಾಗುತ್ತದೆ ಏಕೆಂದರೆ ಈ ಪುಟ್ಟ ಕಾಳುಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ವಿವಿಧ ಬಗೆಯ ವಿಟಮಿನ್‌ಗಳ ಆಗರವೇ ಅಡಗಿದೆ. ಆರೋಗ್ಯ ತಜ್ಞರ ಪ್ರಕಾರ, ಹಸಿ ಬಟಾಣಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಕೊಲೆಸ್ಟ್ರಾಲ್ ಮಟ್ಟವನ್ನು ಇಳಿಸುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಸುಧಾರಿಸುವವರೆಗೆ ಇದು ಕೆಲಸ ಮಾಡುತ್ತದೆ. ಹಾಗಾದರೆ, ಈ ಚಳಿಗಾಲದಲ್ಲಿ ಹಸಿರು ಬಟಾಣಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಪ್ರಮುಖ ಪ್ರಯೋಜನಗಳು ಮತ್ತು ಯಾವೆಲ್ಲ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಹಸಿರು ಬಟಾಣಿಗಳು ಜೀವಸತ್ವಗಳು ಮತ್ತು ಖನಿಜಗಳ ಅದ್ಭುತ ಮೂಲವಾಗಿದೆ. ಅವು ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಫೈಬರ್, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿವೆ. ಇಷ್ಟೇ ಅಲ್ಲದೆ, ಅವು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಸಹ ಒದಗಿಸುತ್ತವೆ. ಅಮೈನೋ ಆಮ್ಲಗಳನ್ನು ಹೊಂದಿರುವ ಬಟಾಣಿಗಳು ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆಯನ್ನು ನೀಗಿಸಲು ಅತ್ಯುತ್ತಮ ಆಯ್ಕೆಯಾಗಿದೆ.
ಹೃದಯದ ಆರೋಗ್ಯಕ್ಕೆ ರಕ್ಷಾಕವಚ
ಹಸಿ ಬಟಾಣಿಗಳು ಪೊಟ್ಯಾಸಿಯಮ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿವೆ. ಇವು ದೇಹದಲ್ಲಿನ ‘ಕೆಟ್ಟ ಕೊಲೆಸ್ಟ್ರಾಲ್’ (LDL) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಇದರಿಂದಾಗಿ ಹೃದಯದ ಆರೋಗ್ಯವು ಸುಧಾರಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ತಗ್ಗಿಸುತ್ತದೆ.
ಮೂಳೆಗಳ ದುರ್ಬಲತೆಯನ್ನು ತಡೆಯುತ್ತದೆ
ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಕೆ ಯನ್ನು ಹೊಂದಿರುವ ಬಟಾಣಿಗಳು ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುವ ಅಥವಾ ಸವೆದುಹೋಗುವ ಪ್ರಕ್ರಿಯೆಯನ್ನು ಇದು ಗಣನೀಯವಾಗಿ ಕಡಿಮೆ ಮಾಡಲು ನೆರವಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ
ಬಟಾಣಿಗಳಲ್ಲಿ ಫೈಬರ್ ಅಂಶವು ಅಧಿಕವಾಗಿದೆ, ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಪ್ರತಿದಿನ ಬಟಾಣಿ ಸೇವಿಸುವುದರಿಂದ ಮಲಬದ್ಧತೆ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವಾರು ಜೀರ್ಣಾಂಗ ಸಮಸ್ಯೆಗಳು ದೂರವಾಗುತ್ತವೆ.
ತೂಕ ಇಳಿಕೆಗೆ ಉತ್ತಮ ಸಹಾಯಕ
ಫೈಬರ್ ಮತ್ತು ಪ್ರೋಟೀನ್ ಅಂಶವು ಅಧಿಕವಾಗಿರುವುದರಿಂದ ಬಟಾಣಿಗಳು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತವೆ. ಇದರಿಂದಾಗಿ ಅತಿಯಾಗಿ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಬೀಳುತ್ತದೆ ಮತ್ತು ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ.

