ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಿಮೆಣಸು ಒಂದು ಸಾಂಬಾರ ಬೆಳೆಯಾಗಿದ್ದು, ಆಯುರ್ವೇದ ಔಷಧಗಳಲ್ಲೂ ಉಪಯೋಗಿಸಲ್ಪಡುತ್ತದೆ. ಕರಿಮೆಣಸಿನ ಬಳ್ಳಿಯ ಹಣ್ಣನ್ನು ಒಣಗಿಸಿ ಕರಿಮೆಣಸಿನ ಕಾಳುಗಳನ್ನು ಪಡೆಯಲಾಗುತ್ತದೆ. ಇದನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ. ಉತ್ತಮ ದರವೂ ಕಾಳುಮೆಣಸಿಗಿದೆ. ಆಂಗ್ಲಭಾಷೆಯಲ್ಲಿ ಪೆಪ್ಪರ್ ಎಂದು ಕರೆಯುವ ಈ ಮೆಣಸು, ಕಪ್ಪು ಬಂಗಾರ ಎಂದೇ ಖ್ಯಾತಿ ಪಡೆದಿದೆ.
ಕರಿಮೆಣಸನ್ನು ಇನ್ನೂ ಮಾಗದ ಹಸಿ ಕಾಳುಮೆಣಸಿನಿಂದ ತಯಾರಿಸುತ್ತಾರೆ. ಹಸಿಯಾದ ಕಾಳುಗಳನ್ನು ನೀರಿನಲ್ಲಿ ಸ್ವಲ್ಪ ಹೊತ್ತಿನವರೆಗೆ ಕುದಿಸಿ ನಂತರ ಶುದ್ಧೀಕರಿಸಿದ ಕಾಳನ್ನು ಒಣಗಿಸುತ್ತಾರೆ. ಈ ಕ್ರಿಯೆಯು ಕಾಳಿನಲ್ಲಿರುವ ಜೀವಕೋಶದ ಹೊರಪದರವನ್ನು ತುಂಡರಿಸಿ, ಕಾಳು ಬೇಗನೆ ಕಂದಲು ಸಹಾಯ ಮಾಡುತ್ತದೆ. ಕಾಳುಗಳನ್ನು ಸಾಮಾನ್ಯವಾಗಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಸಮಯದಲ್ಲಿ ಕಾಳಿನ ಸುತ್ತಲಿರುವ ಹಣ್ಣು ಸಂಕುಚನಗೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಒಣಗಿದ ಕಾಳನ್ನು ಕರಿಮೆಣಸು ಎನ್ನುತ್ತಾರೆ.
ಮೆಣಸಿನ ಹೊರ ಕವಚವನ್ನು ಬೇರ್ಪಡಿಸಿ ಉಳಿಯುವ ಕಾಳಿಗೆ ಬಿಳಿ ಮೆಣಸು ಎನ್ನುತ್ತಾರೆ. ಚೆನ್ನಾಗಿ ಹಣ್ಣಾದ ಮೆಣಸನ್ನು ಸುಮಾರು ಒಂದು ವಾರ ನೀರಿನಲ್ಲಿ ನೆನೆಸಿಟ್ಟರೆ, ಅದರ ಹಣ್ಣಿನಂಥಹ ಹೊರಕವಚ ಮೆತ್ತಗಾಗಿ ಕೊಳೆಯಲಾರಂಭಿಸುತ್ತದೆ. ನೀರಿನಿಂದ ಹೊರತೆಗೆದು ಉಜ್ಜಿದರೆ, ಈ ಹಣ್ಣಿನ ಅಂಶ ಹಾಗೂ ಬೀಜ ಬೇರ್ಪಡುತ್ತವೆ. ಹೀಗೆ ಬೇರ್ಪಟ್ಟ ಬೀಜವನ್ನು ಒಣಗಿಸಿದಾಗಿ ಬಿಳಿಮೆಣಸು ತಯಾರಾಗುತ್ತದೆ. ಇನ್ನೂ ಮಾಗದ ಮೆಣಸನ್ನು ಒಣಗಿಸಿ ತಯಾರಿಸಲಾದ ಕರಿಮೆಣಸಿನ ಹೊರ ಕವಚವನ್ನು ತಗೆದು ಬಿಳಿಮೆಣಸು ತಯಾರಿಸುವ ಪದ್ಧತಿಯೂ ಇದೆ. ಬಿಳಿಮೆಣಸಿಗೆ ಉತ್ತಮ ದರ ಲಭ್ಯವಾಗುತ್ತದೆ.
ಮಲಬದ್ಧತೆ, ಅತಿಸಾರ, ಕಿವಿನೋವು, ವ್ರಣ, ಹೃದ್ರೋಗ, ಹರ್ನಿಯಾ, ಗಂಟಲ ಬೇನೆ, ಅಜೀರ್ಣ, ಕೀಟ ವಿಷಭಾದೆ, ನಿದ್ರಾಹೀನತೆ, ಕೀಲು ನೋವು, ಯಕೃತ್ತಿನ ತೊಂದರೆ, ಶ್ವಾಶಕೋಶದ ಕಾಯಿಲೆಗಳು, ಬಾಯಿ ಹುಣ್ಣು, ಚರ್ಮರೋಗ, ಹುಳುಕು ಹಲ್ಲು, ಮತ್ತು ಹಲ್ಲು ನೋವುಗಳಿಗೆ ಔಷಧಿಯಂತೆ ಕಾಳುಮೆಣಸು ಉಪಯೋಗಿಸಲಾಗುತ್ತದೆ. ಶೀತ ಮತ್ತು ಕೆಮ್ಮು ಇದ್ದರೆ ಕರಿಮೆಣಸು ಬಹಳ ಉತ್ತಮ. ಶೀತ ಮತ್ತು ಕೆಮ್ಮು ಇದ್ದರೆ ಟೀ ಮಾಡುವಾಗ ಕರಿಮೆಣಸು ಮತ್ತು ತುಳಸಿ ಎಲೆಗಳನ್ನು ಸೇರಿಸಿ ಕುಡಿಯಿರಿ ಇದರಿಂದ ನಿಮ್ಮ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಜೀರ್ಣಶಕ್ತಿ ಸಮಸ್ಯೆ ಇರುತ್ತದೆ ಅಂಥವರು ನಿಯಮಿತವಾಗಿ ಕರಿಮೆಣಸನ್ನು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.