ಗುಲಾಬಿ ಹೂವು ತನ್ನ ಸೌಂದರ್ಯದಿಂದ ಮಾತ್ರವಲ್ಲ, ಅದರ ಆರೋಗ್ಯದ ಲಾಭಗಳಿಂದಲೂ ವಿಶ್ವದಾದ್ಯಾಂತ ಜನಪ್ರಿಯವಾಗಿದೆ. ಈ ಹೂವಿನಿಂದ ತಯಾರಿಸಲಾಗುವ ರೋಸ್ ಟೀ ಅಥವಾ ಗುಲಾಬಿ ಚಹಾ ದೇಹದ ಮತ್ತು ಮನಸ್ಸಿನ ಆರೋಗ್ಯ ಸುಧಾರಣೆಗೆ ಸಾಕಷ್ಟು ಸಹಕಾರಿಯಾಗುತ್ತದೆ. ಚೀನಾದಲ್ಲಿ ಹುಟ್ಟಿಕೊಂಡ ಈ ಪಾನೀಯ ಇಂದು ಜಗತ್ತಿನ ಹಲವೆಡೆ ಆರೋಗ್ಯಕರ ಚಹಾ ಎಂಬ ಖ್ಯಾತಿಗೆ ಪಾತ್ರವಾಗಿದೆ.
ರೋಸ್ ಟೀ ಎಂದರೇನು?
ರೋಸ್ ಟೀ ಎಂದರೆ ಒಣಗಿದ ಗುಲಾಬಿ ಮೊಗ್ಗುಗಳು ಅಥವಾ ದಳಗಳನ್ನು ಕುದಿಯುವ ನೀರಿನಲ್ಲಿ ನೆನೆಸಿ ತಯಾರಿಸುವ ಹಾರ್ಬಲ್ ಟೀ. ಇದು ಸಂಪೂರ್ಣವಾಗಿ ಕೆಫೀನ್ ಮುಕ್ತವಾಗಿದ್ದು, ಜೀರ್ಣಕ್ರಿಯೆ ಸುಧಾರಣೆ, ನಿದ್ರೆ ಸಮಸ್ಯೆ ನಿವಾರಣೆ, ಆಂತರಿಕ ಶುದ್ಧೀಕರಣ, ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಸಹಾಯಕವಾಗುತ್ತದೆ.
ಆರೋಗ್ಯದ ಪ್ರಮುಖ ಪ್ರಯೋಜನಗಳು
ರೋಜ್ ಟೀ ಕುಡಿಯುವುದರಿಂದ ಹೊಟ್ಟೆಯುಬ್ಬರ, ತಲೆನೋವು, ಋತುಬಂಧದ ಸಮಸ್ಯೆಗಳು, ಮುಟ್ಟಿನ ಸಮಯದ ನೋವಿಗೆ ಪರಿಹಾರ ಸಿಗುತ್ತದೆ. ತಜ್ಞರ ಪ್ರಕಾರ ರಾತ್ರಿ ಈ ಟೀ ಸೇವನೆ ಮಾಡಿದರೆ ನಿದ್ರಾಹೀನತೆ ತಡೆಯಬಹುದು. ಇದು ದೇಹದಲ್ಲಿ ತಂಪು ಉಂಟು ಮಾಡಿ ನಿರ್ಜಲೀಕರಣ ತಡೆಯುತ್ತದೆ. ಆಕ್ಸಿಡೆಂಟ್‌ಗಳಿಂದ ದೇಹದಲ್ಲಿ ಉಂಟಾಗುವ ಒಳಗಿನ ಉರಿಯೂತ ಕಡಿಮೆಯಾಗುತ್ತದೆ.
ಇದು ಮನಸ್ಸನ್ನು ಶಾಂತಗೊಳಿಸುತ್ತೆ. ಖಿನ್ನತೆ, ಒತ್ತಡ ಮತ್ತು ಆತಂಕ ನಿಯಂತ್ರಣದಲ್ಲಿ ಇರುತ್ತದೆ. ನಿದ್ರೆ ಉತ್ತಮವಾಗುತ್ತದೆ. ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಿ ದೇಹವನ್ನು ಶುದ್ಧೀಕರಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಪಾನೀಯವಾಗಿದೆ.
ರೋಸ್ ಟೀ ತಯಾರಿಸುವ ವಿಧಾನ
ಮೂರು ಒಣಗಿದ ಗುಲಾಬಿ ಹೂವುಗಳು, ಒಂದು ಚಮಚ ರೋಸ್ ವಾಟರ್, ಎರಡು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ರಸ, ಒಂದು ಲೀಟರ್ ನೀರು ಮತ್ತು ಎರಡು ಹಸಿರು ಟೀ ಬ್ಯಾಗ್ ತೆಗೆದುಕೊಳ್ಳಿ.
ಅರ್ಧ ಲೀಟರ್ ನೀರನ್ನು ಕುದಿಸಿ, ಅದರಲ್ಲಿ ಗುಲಾಬಿ ದಳ ಮತ್ತು ನಿಂಬೆ ರಸವನ್ನು ಹಾಕಿ ಸುಮಾರು ಐದು ಗಂಟೆಗಳ ಕಾಲ ನೆನೆಸಿಡಿ. ನಂತರ ಅದಕ್ಕೆ ಹಸಿರು ಟೀ ಬ್ಯಾಗ್ ಹಾಕಿ ಮತ್ತೆ ಕುದಿಸಿ. ಕೊನೆಗೆ ಜೇನುತುಪ್ಪ ಸೇರಿಸಿ, ಸೋಸಿ ಸೇವಿಸಿ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)