ದೇಹದ ಎಲ್ಲ ಅಂಗಾಂಗಗಳೊಂದಿಗೆ ಸಂಪರ್ಕ ಸಾಧಿಸಿ, ಮೆದುಳಿನಿಂದ ಸಂದೇಶಗಳನ್ನು ಸಾಗಿಸುವ ಕಾರ್ಯವನ್ನು ನರಮಂಡಲ ಮಾಡುತ್ತದೆ. ನರಗಳು ಆರೋಗ್ಯವಾಗಿದ್ದರೆ ಮಾತ್ರ ದೇಹ ಸರಿಯಾಗಿ ಕಾರ್ಯನಿರ್ವಹಿಸಬಹುದು. ಆದರೆ ಇತ್ತೀಚಿನ ಬದುಕಿನ ಶೈಲಿ, ಒತ್ತಡ ಹಾಗೂ ಆಹಾರದ ಅಸಮತೋಲನದಿಂದಾಗಿ ನರಗಳ ಆರೋಗ್ಯದಲ್ಲಿ ಹಾನಿ ಉಂಟಾಗುತ್ತಿದೆ. ನಮ್ಮ ಅಜಾಗೃತ ಆಹಾರಗಳೇ ಇದಕ್ಕೆ ಪ್ರಮುಖ ಕಾರಣವಾಗಿವೆ. ಇಲ್ಲಿವೆ ನಿಮ್ಮ ನರಮಂಡಲದ ಆರೋಗ್ಯಕ್ಕೆ ಅಪಾಯಕಾರಿಯಾದ ಕೆಲವು ಆಹಾರಗಳ ಪಟ್ಟಿ:
ಸಕ್ಕರೆ ಪಾನೀಯಗಳು ಮೆದುಳಿಗೆ ಶತ್ರು
ಸೋಡಾ, ಸಕ್ಕರೆ ಪಾನೀಯಗಳು, ಪ್ಯಾಕ್ ಮಾಡಿದ ಹಣ್ಣಿನ ರಸಗಳು ಇತ್ಯಾದಿ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನೊಳಗೊಂಡಿದ್ದು, ನರವ್ಯವಸ್ಥೆಗೆ ಹಾನಿ ಉಂಟುಮಾಡುತ್ತವೆ. ಇದರಿಂದ ಮಧುಮೇಹ,ರಕ್ತದೊತ್ತಡ, ಮೆದುಳಿನ ಕಾರ್ಯಕ್ಷಮತೆ ಕುಂದುವುದು, ಆಲ್ಝೈಮರ್ ರೋಗವನ್ನೂ ಉಂಟುಮಾಡಬಹುದು.
ಪ್ಯಾಕ್ಡ್ ಆಹಾರದಲ್ಲಿ ಪೋಷಕಾಂಶಗಳ ಕೊರತೆ
ಸೌಕರ್ಯದ ನೆಪದಲ್ಲಿ ಸಂಸ್ಕರಿಸಿದ ಆಹಾರಗಳ ಕಡೆಗೆ ನಾವು ಹೆಚ್ಚು ಆಕರ್ಷಿತರಾಗುತ್ತೇವೆ. ಆದರೆ ಇವುಗಳಲ್ಲಿ ಹೆಚ್ಚು ಉಪ್ಪು, ಸಕ್ಕರೆ ಮತ್ತು ಕೃತಕ ರಾಸಾಯನಿಕಗಳಿರುತ್ತವೆ. ಇದು ನರವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಜಂಕ್ ಫುಡ್ – ತಾತ್ಕಾಲಿಕ ರುಚಿಗೆ ಶಾಶ್ವತ ನಷ್ಟ
ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್ ಇತ್ಯಾದಿ ಆಹಾರಗಳು ನರವ್ಯವಸ್ಥೆಗೆ ಅತ್ಯಂತ ಅಪಾಯಕಾರಿ. ಇವುಗಳಲ್ಲಿ ಹೆಚ್ಚು ಪ್ರಮಾಣದ ಟ್ರಾನ್ಸ್ ಫ್ಯಾಟ್, ಸೋಡಿಯಮ್ ಇತ್ಯಾದಿಗಳು ಇರುತ್ತವೆ. ಇದು ನರ ದೌರ್ಬಲ್ಯ ಉಂಟುಮಾಡಬಹುದು.
ಅತಿಯಾದ ಸಿಹಿತಿಂಡಿಗಳು
ಅತಿಯಾದ ಸಕ್ಕರೆ ಸೇವನೆಯು ನರವ್ಯವಸ್ಥೆಯು ನಿಧಾನವಾಗಿ ದುರ್ಬಲಗೊಳ್ಳಲು ಕಾರಣವಾಗಬಹುದು. ಇದರಿಂದ ಇನ್ಸುಲಿನ್ ಪ್ರತಿರೋಧ, ನ್ಯೂರೋಪತಿ ಸಮಸ್ಯೆಗಳು ಉಂಟಾಗಬಹುದು, ವಿಶೇಷವಾಗಿ ಮಧುಮೇಹ ರೋಗಿಗಳಲ್ಲಿ.
ಮದ್ಯಪಾನ ಮತ್ತು ಧೂಮಪಾನ – ನರವ್ಯವಸ್ಥೆಯ ಶತ್ರು
ಮದ್ಯಪಾನ ಮತ್ತು ಧೂಮಪಾನದಿಂದ ನರವ್ಯವಸ್ಥೆಯಲ್ಲಿ ರಾಸಾಯನಿಕ ಅಸ್ಥಿರತೆ ಉಂಟಾಗುತ್ತದೆ. ವಿಟಮಿನ್ ಬಿ1 ಕೊರತೆಯ ಮೂಲಕ ವೆರ್ನಿಕೆ-ಕೊರ್ಸಕೋಫ್ ಸಿಂಡ್ರೋಮ್ ಉಂಟಾಗುವ ಸಾಧ್ಯತೆ ಇದ್ದು, ಇದು ನರಗಳಿಗೆ ಭಾರೀ ಹಾನಿಯನ್ನುಂಟುಮಾಡಬಹುದು.
ನರಗಳಿಗೆ ಹಿತಕರ ಆಹಾರಗಳು ಯಾವುವು?
ಒಮೆಗಾ-3ನಿಂದ ಸಮೃದ್ಧವಾದ ಅಗಸೆ ಬೀಜ, ವಾಲ್ನಟ್ ಮತ್ತು ಬಾದಾಮಿ, ವಿಟಮಿನ್‌ಗಳು ಮತ್ತು ಖನಿಜಾಂಶಗಳಿಂದ ತುಂಬಿರುವ ಪಾಲಕ್, ಬ್ರೊಕೊಲಿ, ಧಾನ್ಯಗಳು, ಕಬ್ಬಿಣ ಮತ್ತು ತಾಮ್ರ ಇರುವ ಕುಂಬಳಕಾಯಿ ಬೀಜಗಳು – ಇವು ಎಲ್ಲಾ ನರಗಳ ದೌರ್ಬಲ್ಯವನ್ನು ತಡೆಯಲು ಸಹಾಯ ಮಾಡುತ್ತವೆ.
ನರವ್ಯವಸ್ಥೆಯ ಆರೋಗ್ಯಕ್ಕೆ ನಿಮ್ಮ ಆಹಾರದ ಅಭ್ಯಾಸ ನೇರವಾಗಿ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ, ಪೋಷಕಾಂಶ ಸಮೃದ್ಧ ಆಹಾರವನ್ನು ಆರಿಸಿ, ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ದೂರವಿಟ್ಟು, ದೀರ್ಘಕಾಲಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ.