ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ 25ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆಗಳು ಜಿಲ್ಲೆಯಾದ್ಯಂತ ಭಾರೀ ಆತಂಕವನ್ನುಂಟು ಮಾಡಿವೆ. ಈ ಅಸಾಮಾನ್ಯ ಸಾವುಗಳ ಸರಣಿಗೆ ನಿಖರವಾದ ಕಾರಣ ತಿಳಿಯಲು ಆರೋಗ್ಯ ಇಲಾಖೆ ಈಗಾಗಲೇ ತನಿಖಾ ಕಾರ್ಯವನ್ನು ಆರಂಭಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, ಸಾರ್ವಜನಿಕರು ತುರ್ತುಸ್ಥಿತಿಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಅರಿವು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ಮೊದಲಿಗೆ ಮಾಡಬೇಕಾದ ಕ್ರಿಯೆಯೇ ಸಿಪಿಆರ್ — ಅಂದರೆ ಹೃದಯ ಮತ್ತು ಶ್ವಾಸಕೋಶ ಪುನರುಜ್ಜೀವನ ತಂತ್ರ.
ಸಿಪಿಆರ್ ಏಕೆ ಮುಖ್ಯ?
ಆಧುನಿಕ ವೈದ್ಯಕೀಯ ಅಧ್ಯಯನಗಳ ಪ್ರಕಾರ, ಹೃದಯಾಘಾತದ ನಂತರ ಮೊದಲ 10 ನಿಮಿಷಗಳು ಅತ್ಯಂತ ನಿರ್ಣಾಯಕವಾಗಿವೆ. ಈ ಅವಧಿಯಲ್ಲಿ ಸರಿಯಾದ ರೀತಿಯಲ್ಲಿ ಸಿಪಿಆರ್ ನೀಡಿದರೆ, ವ್ಯಕ್ತಿಯ ಜೀವ ಉಳಿಸುವ ಶೇಕಡಾ 50ಕ್ಕಿಂತ ಹೆಚ್ಚಿನ ಸಾಧ್ಯತೆ ಇದೆ. ಹೃದಯ ಸ್ಥಗಿತಗೊಂಡರೂ ಕೂಡ, ಸಿಪಿಆರ್ ಮೂಲಕ ಹೃದಯಕ್ಕೆ ರಕ್ತದ ಹರಿವನ್ನು ಪುನಃ ಆರಂಭಿಸಬಹುದಾಗಿದ್ದು, ಮೆದುಳು ಮತ್ತು ಇತರ ಅವಯವಗಳಿಗೆ ಆಮ್ಲಜನಕ ತಲುಪಿಸಲು ಇದು ಸಹಕಾರಿಯಾಗಿದೆ.
ಸಿಪಿಆರ್ ನೀಡುವ ಸರಿಯಾದ ವಿಧಾನ:
ಪ್ರಥಮವಾಗಿ, ರೋಗಿಯನ್ನು ಸಮತಟ್ಟಾದ ಮೇಲ್ಮೈಯಲ್ಲಿ ಬೆನ್ನಿನ ಮೇಲೆ ಮಲಗಿಸಿ. ಮೂಗನ್ನು ಚಿವುಟಿ, ನಿಮ್ಮ ಬಾಯಿ ಅವರ ಬಾಯಿ ಮೇಲೆ ಸಂಪೂರ್ಣವಾಗಿ ಮುಚ್ಚಿ, 1 ಸೆಕೆಂಡ್ ಕಾಲ ಉಸಿರನ್ನು ನಿಧಾನವಾಗಿ ಊದಿ. ಈ ವೇಳೆ, ಒಂದು ಕೈಯನ್ನು ಇನ್ನೊಂದರ ಮೇಲೆ ಇರಿಸಿ, ಎರಡೂ ಕೈಗಳನ್ನು ರೋಗಿಯ ಎದೆಯ ಮಧ್ಯಭಾಗದಲ್ಲಿ ಇರಿಸಿ. ಮೊಣಕೈಗಳನ್ನು ನೇರವಾಗಿಟ್ಟು, ಗಟ್ಟಿಯಾಗಿ ಒತ್ತಿರಿ. ನಂತರ ನಿಮಿಷಕ್ಕೆ ಕನಿಷ್ಠ 100-120 ಬಾರಿ ಒತ್ತುವಿಕೆಯನ್ನು ಮಾಡಿ, ಹೀಗೆ ಒಂದು ಒತ್ತುವಿಕೆಯೂ 1-2 ಇಂಚು ಆಳವಾಗಿ ಒತ್ತಿರಿ ನಿರಂತರವಾಗಿ ನೀಡಬೇಕು.
30 ಬಾರಿ ಎದೆ ಒತ್ತಿದ ನಂತರ, ಬಾಯಿಯಿಂದ ಬಾಯಿಗೆ ಎರಡು ಉಸಿರಾಟಗಳನ್ನು ನೀಡಿ. ಈ ಪ್ರಕ್ರಿಯೆಯನ್ನು ವ್ಯಕ್ತಿಯು ಉಸಿರಾಡುವವರೆಗೆ ಅಥವಾ ವೈದ್ಯಕೀಯ ಸಹಾಯ ತಲುಪುವವರೆಗೆ ಮುಂದುವರಿಸಬೇಕು.
ಸಿಪಿಆರ್ ನಿಲ್ಲಿಸಬಹುದಾದ ಸಂದರ್ಭಗಳು:
ವ್ಯಕ್ತಿಯು ಉಸಿರಾಟವನ್ನು ಪುನರ್ ಆರಂಭಿಸಿದಾಗ, ಅಥವಾ ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬಂದು ಮುಂದಿನ ನಿರ್ವಹಣೆಯನ್ನು ತೆಗೆದುಕೊಳ್ಳುವವರೆಗೆ ಸಿಪಿಆರ್ ನಿಲ್ಲಿಸಬಾರದು.
ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು?
ಹೃದಯಾಘಾತದ ಲಕ್ಷಣಗಳು ಕಂಡುಬಂದ ತಕ್ಷಣವೇ 108 ಗೆ ಕರೆ ಮಾಡಿ. ಸಹಾಯ ಬರುವವರೆಗೆ ಸಿಪಿಆರ್ ನೀಡುವುದು ಅತ್ಯಂತ ಅಗತ್ಯ. ಆರೋಗ್ಯ ತಜ್ಞರು ತಿಳಿಸುವಂತೆ, ಪ್ರತಿಯೊಬ್ಬ ನಾಗರಿಕರೂ ಸಿಪಿಆರ್ ತರಬೇತಿ ಪಡೆಯಬೇಕಾದ ಅವಶ್ಯಕತೆ ಇದೆ.
ಈ ಹೃದಯಾಘಾತದ ಸಾವುಗಳು ಸತತವಾಗಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರತೆ ವಹಿಸಬೇಕು. ಹೃದಯದ ಸಂಬಂಧಿತ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಜೊತೆಗೆ, ಸಿಪಿಆರ್ ನೀಡುವ ಕೌಶಲ್ಯವನ್ನು ಕಲಿತರೆ, ಅನೇಕ ಪ್ರಾಣಗಳನ್ನು ತಕ್ಷಣ ಉಳಿಸಬಹುದಾಗಿದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)