ಚಳಿಗಾಲ ಶುರುವಾಯುತ್ತಿದ್ದಂತೆಯೇ ದೇಹದಲ್ಲಿ ಕೆಮ್ಮು, ನೆಗಡಿ, ಜ್ವರದಂತಹ ಸಾಮಾನ್ಯ ಅಸ್ವಸ್ಥತೆಗಳು ಹೆಚ್ಚಾಗುತ್ತವೆ. ಶೀತ ಋತುವಿನ ತಂಪು ಗಾಳಿ ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದರಿಂದ ಸಣ್ಣ ಸೋಂಕುಗಳೂ ಸುಲಭವಾಗಿ ತಾಕಬಹುದು. ದೇಹವನ್ನು ರೋಗಗಳಿಂದ ದೂರವಿಟ್ಟು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ತ್ವರಿತ ಪರಿಹಾರಕ್ಕಿಂತ ನಿಯಮಿತ, ಆರೋಗ್ಯಕರ ಅಭ್ಯಾಸಗಳು ಹೆಚ್ಚು ಪರಿಣಾಮಕಾರಿ.
ಈ ಋತುವಿನಲ್ಲಿ ಸರಳ ಜೀವನಶೈಲಿ ಬದಲಾವಣೆಗಳ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮೊದಲನೆಯದಾಗಿ, ವಿಟಮಿನ್ ಸಿ ಸಮೃದ್ಧ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಅತ್ಯಂತ ಮುಖ್ಯ. ಕಿತ್ತಳೆ, ನೆಲ್ಲಿಕಾಯಿ, ದಾಳಿಂಬೆ ಮುಂತಾದ ಹಣ್ಣುಗಳು ದೇಹಕ್ಕೆ ಅಗತ್ಯವಾದ ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸಿ ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. ಜೊತೆಗೆ ದ್ವಿದಳ ಧಾನ್ಯಗಳು, ಬೇಳೆ-ಬೀಜಗಳು ದೇಹದ ರೋಗಪ್ರತಿರೋಧಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತವೆ.
ಇನ್ನೊಂದು ಮುಖ್ಯ ಸಂಗತಿ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳುವುದು. ಚಳಿಗಾಲದಲ್ಲಿ ದಾಹ ಕಡಮೆಯಾಗಿದ್ದರೂ, ದೇಹಕ್ಕೆ ನೀರಿನ ಅಗತ್ಯ ಅಷ್ಟೇ. ಚಹಾ–ಕಾಫಿ ನಿರ್ಜಲೀಕರಣಕ್ಕೆ ಕಾರಣವಾಗುವ ಕಾರಣ, ಅವುಗಳ ಬದಲಿಗೆ ನಿಂಬೆ–ಜೇನುತುಪ್ಪ ಇರುವ ಬೆಚ್ಚಗಿನ ನೀರು ಅಥವಾ ಗಿಡಮೂಲಿಕೆ ಪಾನೀಯಗಳನ್ನು ಸೇವಿಸುವುದು ಸೂಕ್ತ.
ದೇಹಕ್ಕೆ ಚುರುಕು ನೀಡುವ ವ್ಯಾಯಾಮ ಮತ್ತು ಸಮರ್ಪಕ ನಿದ್ರೆ ಕೂಡ ಹಿಮ ಋತುವಿನಲ್ಲಿ ಅತಿ ಅಗತ್ಯ. ಪ್ರತಿದಿನ ವೇಗದ ನಡಿಗೆ ಅಥವಾ ಯೋಗ ರೋಗನಿರೋಧಕ ಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದಿನಕ್ಕೆ ಕನಿಷ್ಠ 7-8 ಗಂಟೆಗಳ ನಿದ್ರೆ ದೇಹದ ಪುನಶ್ಚೇತನಕ್ಕೆ ಸಹಾಯಕ.
ಅದೇ ರೀತಿ, ಜ್ವರ ಹಾಗೂ ನ್ಯುಮೋನಿಯಾ ವಿರುದ್ಧ ಲಸಿಕೆ ಪಡೆಯುವುದು, ಜನಸಂದಣಿ ಪ್ರದೇಶಗಳಿಂದ ದೂರವಿರುವುದು, ಕೈಗಳನ್ನು ನಿಯಮಿತವಾಗಿ ತೊಳೆಯುವುದು ಮುಂತಾದ ಸ್ವಚ್ಛತಾ ಕ್ರಮಗಳು ಸೋಂಕು ತಡೆಗಟ್ಟುವ ಪ್ರಮುಖ ಹೆಜ್ಜೆಗಳು. ಮಧುಮೇಹ, ರಕ್ತದೊತ್ತಡ, ಉಸಿರಾಟದ ಸಮಸ್ಯೆ ಇರುವವರು ಚಳಿಗಾಲದಲ್ಲಿ ಆರೋಗ್ಯ ತಪಾಸಣೆಗೆ ವಿಶೇಷ ಗಮನ ಕೊಡಬೇಕು.
ಸರಿಯಾದ ಆಹಾರ, ಸಮರ್ಪಕ ವಿಶ್ರಾಂತಿ ಮತ್ತು ನಿತ್ಯದ ಆರೈಕೆಯಿಂದ ಚಳಿಗಾಲವನ್ನು ಆರೋಗ್ಯಕರವಾಗಿ ಎದುರಿಸಲು ಸಾಧ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

