ಸಕ್ಕರೆ ಅಂಶವು ಮಕ್ಕಳ ಕಲಿಕೆ ಮತ್ತು ಏಕಾಗ್ರತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತೇ?
ಇತ್ತೀಚೆಗೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಹೊಸತಾಗಿ ಒಂದು ನಿಯಮ ಜಾರಿಗೆ ತಂದಿದೆ. ಈ ನಿಯಮವು ದೇಶಾದ್ಯಂತ ಚರ್ಚೆ ಹುಟ್ಟಿಸಿದೆ. ಅಂದಹಾಗೆ ಈ ನಿಯಮ ಏನೆಂದರೆ ಶಾಲೆಗಳಲ್ಲಿ ಮಕ್ಕಳ ಸಕ್ಕರೆ ಸೇವನೆಯನ್ನು ಮೇಲ್ವಿಚಾರಣೆ ಮಾಡಲು “ಶುಗರ್ ಬೋರ್ಡ್” ಗಳನ್ನು ಸ್ಥಾಪಿಸಬೇಕು ಎಂಬುದು ಈ ಹಿಂದೆ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದ್ದ ಟೈಪ್ 2 ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಲ್ಲೂ ಹೆಚ್ಚಾಗುತ್ತಿದೆ. ಹೀಗಾಗಿ ಸಕ್ಕರೆ ಸೇವನೆಯ ಬಗ್ಗೆ ಮಾಹಿತಿ ನೀಡುವ ಬೋರ್ಡ್‌ಗಳನ್ನು ಶಾಲೆಗಳಲ್ಲಿ ಅಳವಡಿಕೆ ಮಾಡಬೇಕೆಂದು ಸೂಚಿಸಿದೆ.
ಮೊದಲ ನೋಟಕ್ಕೆ ಇದು ಮತ್ತೊಂದು ಆಡಳಿತ ಕ್ರಮವೆಂದು ತೋರಿದರೂ ಮಕ್ಕಳೊಂದಿಗೆ ಕೆಲಸ ಮಾಡುವ ನರಶಾಸ್ತ್ರಜ್ಞನಾಗಿರುವ ನಾನು ಈ ಕ್ರಮವನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ.
ಕ್ಯಾಂಡಿಗಳು, ಕುಕೀಸ್‌ಗಳು ಮತ್ತು ಸಿಹಿ ಪಾನೀಯಗಳ ರುಚಿ ಮಕ್ಕಳಿಗೆ ಬಹಳ ಆಕರ್ಷಣೆ ಉಂಟು ಮಾಡುತ್ತವೆ. ಆದರೆ ಈ ಆಕರ್ಷಣೆಯ ಹಿಂದೆ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯವೊಂದು ತಣ್ಣಗೆ ಕಾದಿರುತ್ತದೆ. ಈ ಸಮಸ್ಯೆಯು ಸಾಮಾನ್ಯವಾಗಿ ಮಕ್ಕಳು ಶೈಕ್ಷಣಿಕವಾಗಿ ಹಿಂದೆ ಬೀಳುವವರೆಗೆ, ಅವರ ಓದಿನ ಕಡೆಗಿನ ಗಮನ ಕಡಿಮೆಯಾಗುವವರೆಗೆ ಅಥವಾ ವರ್ತನೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳುವವರೆಗೆ ಯಾರ ಅರಿವಿಗೂ ಬರುವುದಿಲ್ಲ.
ಮೆದುಳಿನ ಮೇಲೆ ಸಕ್ಕರೆ ಪ್ರಭಾವ ಹೇಗಿದೆ ಗೊತ್ತಾ?
ಮೆದುಳು ದೇಹದ ತೂಕದ ಕೇವಲ ಎರಡು ಪ್ರತಿಶತವನ್ನು ಹೊಂದಿದ್ದರೂ ಇದು ದೇಹದ ಶಕ್ತಿಯ ಸುಮಾರು 20 ಪ್ರತಿಶತವನ್ನು ಗ್ಲೂಕೋಸ್ ರೂಪದಲ್ಲಿ, ಬಳಸಿಕೊಳ್ಳುತ್ತದೆ. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ ಹೆಚ್ಚಿನ ಸಕ್ಕರೆ ಅಂಶವು ಮೆದುಳಿಗೆ ನಕರಾತ್ಮಕ ಪರಿಣಾಮ ಉಂಟುಮಾಡಬಹುದು.
ಸಾಫ್ಟ್ ಡ್ರಿಂಕ್ ಗಳು, ಕರಿದ ತಿಂಡಿಗಳು ಮತ್ತು ಹೆಲ್ದೀ ಎನರ್ಜಿ ಬಾರ್ ಗಳೆಂದು ಕರೆಯಲ್ಪಡುವ ಖಾದ್ಯಗಳಲ್ಲಿ ಹೆಚ್ಚುವರಿ ಸಕ್ಕರೆಯ ಅಂಶವಿದ್ದು, ಅದನ್ನು ಸೇವನೆ ಮಾಡಿದಾಗ ರಕ್ತದ ಸಕ್ಕರೆ ಮಟ್ಟದಲ್ಲಿ ಏರಿಳಿತ ಉಂಟಾಗುತ್ತದೆ. ಇದರಿಂದ ಈ ಕೆಳಗಿನ ಸಮಸ್ಯೆಗಳು ಉಂಟಾಗಬಹುದು:
• ಮಾನಸಿಕ ತೀಕ್ಷಣತೆಯಲ್ಲಿ ಕೊರತೆ
• ಕಿರಿಕಿರಿ
• ಗಮನ ಕೇಂದ್ರೀಕರಿಸುವುದರಲ್ಲಿ ಹಿನ್ನೆಡೆ
• ಹೆಚ್ಚಿನ ಚಟುವಟಿಕೆಯ ನಡೆಸಿದ ಬಳಿಕ ಮಾನಸಿಕ ದಣಿವು
ಇವೆಲ್ಲವೂ ಕೇವಲ ಊಹಾಪೋಹ ಅಥವಾ ವದಂತಿಗಳಲ್ಲ. ಹಲವಾರು ಅಧ್ಯಯನಗಳು ಇದನ್ನು ಖಚಿತಪಡಿಸಿವೆ. ಹೆಚ್ಚಿನ ಸಕ್ಕರೆ ಅಂಶವುಳ್ಳ ಆಹಾರ ಸೇವನೆಯು ಮೆದುಳಿನ ಡೋಪಮೈನ್ ಸಿಗ್ನಲಿಂಗ್ ನಲ್ಲಿ ಬದಲಾವಣೆ ಉಂಟುಮಾಡುತ್ತದೆ, ಇದರಿಂದ ಮಕ್ಕಳ (Reward) ಉತ್ತೇಜನ ನೀಡುವ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಉತ್ತೇಜನ ಇಲ್ಲದಿದ್ದರೆ ಅವರಿಗೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ.
ವಾಸ್ತವವಾಗಿ ಹೆಚ್ಚಿನ ಸಕ್ಕರೆ ಸೇವಿಸುವ ಮಕ್ಕಳ ಮಿದುಳಿನ ಸ್ಕ್ಯಾನ್ ಮಾಡಿದಾಗ ಅವರಲ್ಲಿ ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ಎ ಡಿ ಎಚ್ ಡಿ) ಇರುವ ಮಕ್ಕಳಲ್ಲಿ ಕಂಡುಬರುವ ಬದಲಾವಣೆಗಳು ಹಾಗೂ ಇವರ ಬದಲಾವಣೆಗಳು ಸಮಾನವಾಗಿರುವುದು ಕಂಡು ಬಂದಿದೆ.
ಸಕ್ಕರೆ ಮತ್ತು ಕಲಿಕೆಯ ಏರಿಳಿತ
ತರಗತಿಯಲ್ಲಿ ಈ ಪರಿಣಾಮವು ಸೂಕ್ಷ್ಮವಾಗಿದ್ದರೂ ಗಂಭೀರವಾಗಿರುತ್ತದೆ. ಸಿಹಿಯಾದ ಉಪಹಾರ ಮತ್ತು ಜ್ಯೂಸ್ ಸೇವನೆ ಮೂಲಕ ದಿನವನ್ನು ಪ್ರಾರಂಭಿಸುವ ವಿದ್ಯಾರ್ಥಿಯು ಮಧ್ಯಾಹ್ನದ ಆಗುವ ಮೊದಲೇ ಆಯಾಸಗೊಂಡು ಆಕಳಿಸುವುದು, ಪಾಠದಲ್ಲಿ ಗಮನ ಕಳೆದುಕೊಳ್ಳುವುದು ಅಥವಾ ಕೀಟಲೆ ಮಾಡುವುದು ಸಾಮಾನ್ಯವಾಗಿದೆ. ಶಿಕ್ಷಕರು ವಿದ್ಯಾರ್ಥಿಯು ಕಡಿಮೆ ಗಮನ ಕೊಡುವುದರಿಂದ, ಪಾಠ ಪೂರ್ತಿ ಕೇಳಿಸಿಕೊಳ್ಳದಿರುವುದರಿಂದ ಮತ್ತು ಪಾಠಕ್ಕೆ ಅಡ್ಡಿಪಡಿಸುವ ವರ್ತನೆಯಿಂದ ಕಿರಿಕಿರಿಗೊಳಗಾಗುತ್ತಾರೆ. ಇವನ್ನೆಲ್ಲಾ ಮಕ್ಕಳು ಶಿಸ್ತಿನ ಕೊರತೆಯಿಂದ ಮಾಡುತ್ತಿರುವುದಿಲ್ಲ, ಅದಕ್ಕೆ ಬದಲಾಗಿ ಆಹಾರದ ಅಸಮತೋಲನದಿಂದ ಮಾಡುತ್ತಿರಬಹುದಾಗಿದೆ.
ದೀರ್ಘಾವಧಿಯಲ್ಲಿ ಹೆಚ್ಚಿನ ಸಕ್ಕರೆ ಸೇವನೆಯಿಂದ ಈ ಕೆಳಗಿನ ಸಮಸ್ಯೆಗಳು ಉಂಟಾಗಬಹುದು:
• ಮೆದುಳಿನ ಅಂಗಾಂಶದ ಉರಿಯೂತ
• ನೆನಪಿನ ಶಕ್ತಿ ಸಮಸ್ಯೆ
• ನರವ್ಯವಸ್ಥೆಯ ಚೈತನ್ಯ ಕಡಿಮೆಯಾಗುವಿಕೆ— ಮೆದುಳಿನ ಕಲಿಯುವ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯಕ್ಕೆ ಪೆಟ್ಟು
ಸಂಕ್ಷಿಪ್ತವಾಗಿ ಹೇಳುವುದಾದರೆ ಹೆಚ್ಚಿನ ಸಕ್ಕರೆ ಅಂಶವು ಮಕ್ಕಳನ್ನು ಕೇವಲ ಹೈಪರ್ ಆಕ್ಟಿವ್ ಮಾಡುವುದಿಲ್ಲ, ಬದಲಿಗೆ ಅವರ ಮೆದುಳನ್ನು ಹಾನಿಕಾರಕ ರೀತಿಯಲ್ಲಿ ಬದಲಿ.
ಸಿಬಿಎಸ್ಇ ಆದೇಶ ಯಾಕೆ ಮುಖ್ಯ?
ಶಾಲೆಗಳಲ್ಲಿ “ಸಕ್ಕರೆ ಬೋರ್ಡ್” ಗಳನ್ನು ಸ್ಥಾಪಿಸುವ ಸಿಬಿಎಸ್ಇಯ ಕ್ರಮವು ಸಣ್ಣ ಕ್ರಮವಾದರೂ ಮಕ್ಕಳ ಆರೋಗ್ಯ ಕಾಪಾಡುವ ವಿಚಾರದಲ್ಲಿ ಬಹಳ ಗಮನಾರ್ಹವಾದ ಆರಂಭದ ಹೆಜ್ಜೆಯಾಗಿದೆ. ಈ ಬೋರ್ಡ್‌ಗಳು ದೈನಂದಿನ ಸಕ್ಕರೆ ಬಳಕೆಯ ಕೋಟಾವನ್ನು ಪ್ರಕಟಿಸಬಹುದು, ಜನಪ್ರಿಯ ಖಾದ್ಯಗಳಲ್ಲಿರುವ ಗುಪ್ತವಾದ ಸಕ್ಕರೆ ಅಂಶಗಳ ಮಾಹಿತಿ ಬಹಿರಂಗಪಡಿಸಬಹುದು ಮತ್ತು ಶಾಲಾ ಕ್ಯಾಂಟೀನ್ ಗಳಲ್ಲಿ ಆರೋಗ್ಯಕರ ಪರ್ಯಾಯ ಖಾದ್ಯಗಳನ್ನು ಬಳಸಲು ಪ್ರೇರಣೆ ನೀಡಬಹುದು.
ಆದರೆ ಇದಿಷ್ಟೇ ಸಾಕಾಗುವುದಿಲ್ಲ. ಈ ಕ್ರಮವು ಪರಿಣಾಮಕಾರಿಯಾಗಿರಬೇಕೆಂದರೆ ಈ ಕೆಳಗಿನ ಕ್ರಮಗಳನ್ನೂ ಕೈಗೊಳ್ಳಬೇಕು:
• ಪೋಷಕರಲ್ಲಿ ಅರಿವು
• ಪಠ್ಯಕ್ರಮದಲ್ಲಿ ಪೌಷ್ಟಿಕ ವಿಜ್ಞಾನದ (Nutritional Science) ಸೇರ್ಪಡೆ
• ಮಕ್ಕಳಿಗೆ ಸಕ್ಕರೆ ಪದಾರ್ಥಗಳ ಮಾರಾಟ ಮಾಡುವ ನೀತಿಯಲ್ಲಿ ಸುಧಾರಣೆ
ಒಬ್ಬ ನರಶಾಸ್ತ್ರಜ್ಞನಾಗಿ ನಾನು ತಮ್ಮ ಮಗುವಿನ ಶೈಕ್ಷಣಿಕ ಗಮನ ಕಡಿಮೆಯಾಗುತ್ತಿರುವ ಬಗ್ಗೆ ಚಿಂತಿತರಾಗಿರುವ ಪೋಷಕರಿಗೆ ಕೌನ್ಸಿಲಿಂಗ್ ನೀಡುತ್ತಿರುತ್ತೇನೆ. ಬಹಳಷ್ಟು ಸಂದರ್ಭಗಳಲ್ಲಿ ಪರಿಹಾರ ವೈದ್ಯರ ಕಚೇರಿಯಲ್ಲಿ ಸಿಗುವುದಿಲ್ಲ, ಬದಲಿಗೆ ಶಾಲೆಯ ಲಂಚ್ ಬಾಕ್ಸ್ ನಲ್ಲಿ ಇರುತ್ತದೆ.
ಪೋಷಕರು ಮತ್ತು ಶಾಲೆಗಳು ಏನು ಮಾಡಬಹುದು?
• ಸಿಹಿ ತಿನಿಸುಗಳನ್ನು ಪ್ರತೀ ದಿನ ನೀಡುವುದಕ್ಕೆ ಬದಲಿಗೆ ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸಿ.
• ನಿಧಾನವಾಗಿ ಮತ್ತು ಸ್ಥಿರವಾಗಿ ಗ್ಲೂಕೋಸ್ ಬಿಡುಗಡೆ ಮಾಡುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ ಮತ್ತು ಹೆಚ್ಚಿನ ಫೈಬರ್ ಆಹಾರಗಳನ್ನು ಸೇವಿಸಲು ಉತ್ತೇಜಿಸಿ.
• ಸಾಫ್ಟ್ ಡ್ರಿಂಕ್ ಗಳ ಬದಲಿಗೆ ನೀರು ಅಥವಾ ತಾಜಾ ಹಣ್ಣಿನ ನೀರನ್ನು ಒದಗಿಸಿ.
• ಶಾಲಾ ದಿನಗಳಲ್ಲಿ ಪೌಷ್ಟಿಕ ಉಪಹಾರ ನೀಡಿ. ಸಿಹಿ ಪದಾರ್ಥಗಳನ್ನು ತಪ್ಪಿಸಿ.
• ಆಹಾರಕ್ಕೆ ಸಂಬಂಧಿಸಿದ ಮಕ್ಕಳ ವರ್ತನೆ ಕುರಿತು ತಿಳಿಯಲು ಶಿಕ್ಷಕರೊಂದಿಗೆ ಮಾತನಾಡಿ.
ಸಿಬಿಎಸ್ಇಯ ಸಕ್ಕರೆ ಬೋರ್ಡ್ ಯೋಜನೆಯು ಆಹಾರ, ಏಕಾಗ್ರತೆ ಮತ್ತು ಆರೋಗ್ಯದ ಕುರಿತು ಮಹತ್ವದ ಚರ್ಚೆ ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಳ್ಳುವ ಜವಾಬ್ದಾರಿ ಶಿಕ್ಷಕರು, ಪೋಷಕರು ಮತ್ತು ವೈದ್ಯಕೀಯ ತಜ್ಞರಾದ ನಮ್ಮೆಲ್ಲರ ಮೇಲಿದೆ.
ಯಾಕೆಂದರೆ ನಮ್ಮ ಮಕ್ಕಳ ಮನಸ್ಸಿನ ವಿಷಯಕ್ಕೆ ಬಂದಾಗ ಅವರನ್ನು ಎಷ್ಟು ಚೆನ್ನಾಗಿ ಪೋಷಿಸುತ್ತೇವೋ ಅಷ್ಟೇ ಚೆನ್ನಾಗಿ ಅವರು ರೂಪುಹೊಂದುತ್ತಾರೆ.
ಲೇಖನ: ಡಾ. ಗುರುಪ್ರಸಾದ್. ಎಸ್. ಪೂಜಾರ್
(ಲೇಖಕರ ಬಗ್ಗೆ: ಇವರು ದಾವಣಗೆರೆಯ ಎಸ್ ಎಸ್ ನಾರಾಯಣ ಸೂಪರ್ ಸ್ಪೆಷಯಾಲಿಟಿ ಸೆಂಟರ್ ನಲ್ಲಿ ಮೆದಳು ಹಾಗೂ ನರರೋಗ ತಜ್ಞರಾಗಿ ಕೆಲಸ ಮಾಡುತ್ತಿದಾರೆ.)