ಸ್ತನ ಕ್ಯಾನ್ಸರ್ ಎಂಬ ಪದ ಕೇಳಿದಾಗ ಹೆಚ್ಚಿನವರು ತಕ್ಷಣವೇ ಆನುವಂಶಿಕತೆ ಅಥವಾ ಕುಟುಂಬ ಇತಿಹಾಸದತ್ತ ಗಮನ ಹರಿಸುತ್ತಾರೆ. ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ, ಸ್ತನ ಕ್ಯಾನ್ಸರ್ ಪ್ರಕರಣಗಳ ಬಹುಪಾಲು ಕುಟುಂಬ ಇತಿಹಾಸವಿಲ್ಲದೇ ಸಂಭವಿಸುತ್ತವೆ. ಇದರ ಅರ್ಥ, ನಮ್ಮ ಜೀವನಶೈಲಿ ಆಯ್ಕೆಗಳು – ಆಹಾರ, ಚಟುವಟಿಕೆಗಳು ಮತ್ತು ನಿದ್ರೆ ಪದ್ಧತಿಯಂತಹ ಅಂಶಗಳು – ಈ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದಾದ ಅಥವಾ ಕಡಿಮೆ ಮಾಡಬಹುದಾದ ಪ್ರಮುಖ ಪಾತ್ರವಹಿಸುತ್ತವೆ.
ತೂಕ ನಿಯಂತ್ರಣ ಮತ್ತು ದೈಹಿಕ ಚಟುವಟಿಕೆ (Weight Management and Physical Activity)
ಬೊಜ್ಜು, ವಿಶೇಷವಾಗಿ ಋತುಬಂಧದ ನಂತರ, ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ – ಇದು ಕೆಲವು ರೀತಿಯ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು. ದಿನಕ್ಕೆ ಕನಿಷ್ಠ 30 ನಿಮಿಷಗಳಷ್ಟು ನಡಿಗೆ, ಸೈಕ್ಲಿಂಗ್ ಅಥವಾ ಯೋಗದಂತಹ ಚಟುವಟಿಕೆಗಳು ಈ ಅಪಾಯವನ್ನು ಕಡಿಮೆ ಮಾಡಬಹುದು.
ಮದ್ಯ ಸೇವನೆ( Alcohol Consumption)
ಆಲ್ಕೋಹಾಲ್ ಸೇವನೆ ಹೆಚ್ಚಾದಂತೆ ಸ್ತನ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ದಿನಕ್ಕೆ ಒಂದು ಬಾರಿ ಸೇವಿಸಿದರೂ 7–10% ರಷ್ಟು ಅಪಾಯ ಹೆಚ್ಚಾಗುತ್ತದೆ ಎನ್ನಲಾಗಿದೆ. ಆದ್ದರಿಂದ ಮಿತಿಯಲ್ಲಿ ಸೇವಿಸುವುದು ಅಥವಾ ಬಿಟ್ಟುಬಿಡುವುದು ಮುಖ್ಯ.
ಧೂಮಪಾನ(Smoking)
ಧೂಮಪಾನ ಶ್ವಾಸಕೋಶ ಕ್ಯಾನ್ಸರ್ ಮಾತ್ರವಲ್ಲದೆ, ಸ್ತನ ಕ್ಯಾನ್ಸರ್‌ಗೆ ಸಹ ಸಂಬಂಧಿಸಿರಬಹುದು. ಇದು ಹಾರ್ಮೋನು ಸಮತೋಲನ ಹದಗೆಡಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಧೂಮಪಾನ ತ್ಯಜಿಸುವುದರಿಂದ ಒಟ್ಟಾರೆ ಆರೋಗ್ಯವೂ ಸುಧಾರಿಸುತ್ತದೆ.
ಗರ್ಭಧಾರಣೆಯ ಸಮಯ ಮತ್ತು ಹಾರ್ಮೋನು ಚಿಕಿತ್ಸೆಗಳು( Hormonal Factors and Late Pregnancy)
ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ಅಥವಾ 30 ವರ್ಷಗಳ ಬಳಿಕ ಗರ್ಭಧಾರಣೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಬಹುದು. ಇದು ತಡೆಯಲಾಗದ ಅಂಶವಾಗಿದ್ದರೂ, ತಜ್ಞರ ಸಲಹೆ ಪಡೆದು ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.
ನಿದ್ರೆ ಮತ್ತು ಒತ್ತಡ ನಿರ್ವಹಣೆ(Sleep and Stress Management)
ಅನಿಯಮಿತ ನಿದ್ರೆ ಮತ್ತು ದೀರ್ಘಕಾಲದ ಒತ್ತಡವು ದೇಹದ ಹಾರ್ಮೋನುಗಳ ಸಮತೋಲನವನ್ನು ಹದಗೆಡಿಸಬಹುದು. ಈ ಅಂಶಗಳು ರೋಗನಿರೋಧಕ ಶಕ್ತಿ ಕುಗ್ಗಿಸುತ್ತದೆ.
ಆಹಾರ ಪದ್ಧತಿ(Balanced and Nutritious Diet)
ಅತಿಯಾದ ಕೆಂಪು ಮಾಂಸ, ಸಂಸ್ಕರಿಸಿದ ಆಹಾರ ಮತ್ತು ಕೊಬ್ಬು ಯುಕ್ತ ಆಹಾರ ಸೇವನೆ ಬೊಜ್ಜು ಮತ್ತು ಉರಿಯೂತಕ್ಕೆ ಕಾರಣವಾಗಬಹುದು. ಮತ್ತೊಂದೆಡೆ, ಹಣ್ಣು, ತರಕಾರಿ ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾಗಿರುವ ಆಹಾರ ಪದ್ಧತಿ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ.
ನಿಯಮಿತ ತಪಾಸಣೆಗಳು ಅತ್ಯವಶ್ಯಕ(Regular Health Screenings)
ಸ್ತನ ಕ್ಯಾನ್ಸರ್ ಲಕ್ಷಣಗಳು ಇಲ್ಲದಿದ್ದರೂ ಸಹ ಮ್ಯಾಮೊಗ್ರಾಂ ಪತ್ತೆ ಮತ್ತು ತಪಾಸಣೆಯು ಮೊದಲು ಪತ್ತೆಹಚ್ಚಲು ನೆರವಾಗಬಹುದು. 40 ವರ್ಷವಾದ ಬಳಿಕ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಆರೋಗ್ಯ ಕಾಪಾಡಿಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ.
ಈ ಲೇಖನ ಅಂತರ್ಜಾಲ ಆಧಾರಿತವಾಗಿದೆ. ಯಾವುದೇ ಅನುಮಾನ ಅಥವಾ ಲಕ್ಷಣಗಳಿದ್ದರೆ ತಕ್ಷಣವೇ ತಜ್ಞರನ್ನು ಸಂಪರ್ಕಿಸುವುದು ಉತ್ತಮ.