ಕಲ್ಲಂಗಡಿ ಹಣ್ಣು ಎಂದರೆ ಎಲ್ಲರಿಗು ಇಷ್ಟ. ರುಚಿಯಲ್ಲೂ ಅದ್ಭುತವಾಗಿರುವ ಈ ಹಣ್ಣು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾದ ಕಲ್ಲಂಗಡಿ ಸೂಪರ್‌ಫುಡ್ ಎಂದೇ ಕರೆಯಬಹುದು. ಆದರೆ, ಎಲ್ಲರಿಗೂ ಇದು ಸಮಾನವಾಗಿ ಒಳ್ಳೆಯದಾಗುವುದಿಲ್ಲ ಎಂಬುದು ನಿಮಗೆ ಗೊತ್ತಿದೆಯೇ? ಕೆಲವು ದೈಹಿಕ ಸಮಸ್ಯೆಗಳಲ್ಲಿ ಇದರ ಸೇವನೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಕಲ್ಲಂಗಡಿಯ ಪೌಷ್ಠಿಕ ಮಹತ್ವ
ಸಂಸ್ಕೃತದಲ್ಲಿ ಕಾಳಿಂದ ಎಂದು ಕರೆಯಲಾಗುವ ಕಲ್ಲಂಗಡಿ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಆಯಾಸವನ್ನು ದೂರ ಮಾಡುತ್ತದೆ ಹಾಗೂ ಮೂತ್ರನಾಳದ ಸೋಂಕಿನಿಂದ ಮುಕ್ತಿ ನೀಡುತ್ತದೆ. ಸುಮಾರು 90% ನೀರನ್ನು ಹೊಂದಿರುವುದರಿಂದ ದೇಹದ ನೀರಿನ ಕೊರತೆಯನ್ನು ನಿವಾರಿಸುತ್ತದೆ. ಇದರಲ್ಲಿರುವ ನೈಸರ್ಗಿಕ ಶರ್ಕರೆ, ವಿಟಮಿನ್ A ಮತ್ತು C ದೇಹಕ್ಕೆ ಶಕ್ತಿ ಹಾಗೂ ಚೈತನ್ಯವನ್ನು ನೀಡುತ್ತವೆ.
ಆಂಟಿಆಕ್ಸಿಡೆಂಟ್‌ಗಳ ಶಕ್ತಿ
ಕಲ್ಲಂಗಡಿಯಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ಈ ರಾಡಿಕಲ್‌ಗಳು ಆಕ್ಸಿಡೇಟಿವ್ ಒತ್ತಡ ಉಂಟುಮಾಡಿ ಜೀವಕೋಶಗಳಿಗೆ ಹಾನಿ ಮಾಡುವುದರಿಂದ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ಕಲ್ಲಂಗಡಿ ಸೇವನೆಯಿಂದ ದೇಹದೊಳಗಿನ ವಿಷಕಾರಿ ಅಂಶಗಳು ಹೊರಹಾಕಲ್ಪಡುತ್ತವೆ ಮತ್ತು ಚರ್ಮಕ್ಕೂ ತಾಜಾತನ ದೊರೆಯುತ್ತದೆ.
ರಕ್ತದೊತ್ತಡ ನಿಯಂತ್ರಣ
ಕಲ್ಲಂಗಡಿಯಲ್ಲಿ ಇರುವ ಸಿಟ್ರುಲ್ಲಿನ್ ಎಂಬ ಅಂಶ ರಕ್ತನಾಳಗಳನ್ನು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ, ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ. ಹೃದಯಾಘಾತ, ಪಾರ್ಶ್ವವಾಯು ಮೊದಲಾದ ಸಮಸ್ಯೆಗಳಿಂದ ದೂರವಿರಲು ಇದು ನೆರವಾಗುತ್ತದೆ.
ಯಾರಿಗೆ ಕಲ್ಲಂಗಡಿ ತಿನ್ನಬಾರದು?
ಇದರ ತಂಪು ಸ್ವಭಾವದಿಂದಾಗಿ ಕಲ್ಲಂಗಡಿ ವಾತ ಮತ್ತು ಕಫ ದೋಷಗಳನ್ನು ಹೆಚ್ಚಿಸಬಹುದು. ಆದ್ದರಿಂದ ಶೀತ, ಕೆಮ್ಮು, ಗಂಟಲು ನೋವು, ಸೈನುಸೈಟಿಸ್, ಅಲರ್ಜಿ ಅಥವಾ ಆಸ್ತಮಾ ಇರುವವರು ಇದರ ಸೇವನೆ ತಪ್ಪಿಸುವುದು ಒಳಿತು. ಹಾಗೆಯೇ ಸಂಧಿವಾತ ಅಥವಾ ಜ್ವರದ ಸಮಯದಲ್ಲಿಯೂ ಕಲ್ಲಂಗಡಿ ತಿನ್ನುವುದರಿಂದ ಸಮಸ್ಯೆ ಹೆಚ್ಚಾಗಬಹುದು.
ವೈದ್ಯಕೀಯ ಸಲಹೆ ಅಗತ್ಯ
ಕಲ್ಲಂಗಡಿ ಹಣ್ಣು ಪೌಷ್ಠಿಕವಾಗಿದ್ದರೂ, ದೇಹದ ಸ್ಥಿತಿಗೆ ತಕ್ಕಂತೆ ಸೇವಿಸುವುದು ಮುಖ್ಯ. ಹೆಚ್ಚು ಪ್ರಮಾಣದಲ್ಲಿ ತಿಂದರೆ ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ಬರುವಿಕೆ ಅಥವಾ ಶೀತ ಉಂಟಾಗಬಹುದು. ಆದ್ದರಿಂದ ನಿಯಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ, ಯಾವುದೇ ಕಾಯಿಲೆ ಇದ್ದರೆ ವೈದ್ಯಕೀಯ ಸಲಹೆ ಪಡೆಯುವುದು ಸುರಕ್ಷಿತ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

