ದೈನಂದಿನ ಆಹಾರದಲ್ಲಿ ಸೇಬು (Apple) ಸೇರಿಸಿಕೊಂಡರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ಎಲ್ಲರಿಗೂ ತಿಳಿದ ಸಂಗತಿ. “An apple a day keeps the doctor away” ಎಂಬ ಮಾತು ನಮಗೆ ದಿನಕ್ಕೆ ಒಂದು ಆಪಲ್ ತಿನ್ನೋದಕ್ಕೆ ಪ್ರೇರೇಪಿಸುತ್ತೆ. ಆದರೆ ಆಯುರ್ವೇದದ ಪ್ರಕಾರ, ಸೇಬನ್ನು ಯಾವಾಗ ತಿನ್ನಬೇಕು ಎಂಬುದು ಅತಿಮುಖ್ಯ. ತಪ್ಪಾದ ಸಮಯದಲ್ಲಿ ಸೇವಿಸಿದರೆ, ಇದರ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ಹೇಳಲಾಗಿದೆ.
ಆಯುರ್ವೇದದ ಪ್ರಕಾರ, ಸೇಬನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ತಿಂದರೆ ಮಲಬದ್ಧತೆ, ವಾಯು ಸಮಸ್ಯೆ, ಹೊಟ್ಟೆ ಅಲರ್ಜಿ ಕಾಣಿಸಿಕೊಳ್ಳಬಹುದು. ಬದಲು, ಬೆಳಗಿನ ಉಪಾಹಾರದ ನಂತರ ಅಥವಾ ಮಧ್ಯಾಹ್ನದ ಊಟದ ಒಂದು ಗಂಟೆಯ ನಂತರ ಸೇವಿಸುವುದು ಉತ್ತಮ.
ಹಾಗೆಯೆ ಸಂಜೆ 6 ಗಂಟೆಯ ನಂತರ ಸೇಬು ಸೇವಿಸುವುದನ್ನು ತಜ್ಞರು ಒಳ್ಳೆವದಲ್ಲ ಎನ್ನುತ್ತಾರೆ. ಈ ಸಮಯದಲ್ಲಿ ದೇಹದ ಜೀರ್ಣಶಕ್ತಿ ನಿಧಾನವಾಗುವ ಕಾರಣ, ಆಹಾರವನ್ನು ಸರಿಯಾಗಿ ಜೀರ್ಣ ಮಾಡುವುದು ಕಷ್ಟವಾಗುತ್ತದೆ. ಇದರ ಪರಿಣಾಮವಾಗಿ ಹೊಟ್ಟೆ ಉಬ್ಬರ, ಜೀರ್ಣದೋಷ, ನಿದ್ರೆ ತೊಂದರೆಗಳು ಎದುರಾಗಬಹುದು.
ಸೇಬು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ: 200 ಗ್ರಾಂ ಸೇಬಿನಲ್ಲಿ ಸುಮಾರು 214 ಮಿಗ್ರಾಂ ಪೊಟ್ಯಾಸಿಯಮ್, 9.2 ಮಿಗ್ರಾಂ ವಿಟಮಿನ್ ಸಿ, ಹಾಗು ಅಲ್ಪ ಪ್ರಮಾಣದಲ್ಲಿ ವಿಟಮಿನ್ ಎ, ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಇರುತ್ತದೆ. ಆದರೆ ಇದನ್ನು ಸಿಪ್ಪೆ ಸಹಿತ ಸೇವಿಸುವುದೇ ಉತ್ತಮ, ಏಕೆಂದರೆ ಸಿಪ್ಪೆಯಲ್ಲಿ ಫೈಬರ್ ಹಾಗೂ ಅನೇಕ ಪೋಷಕಾಂಶಗಳು ಇರುತ್ತವೆ.
ಅಂತೆಯೇ, ಪ್ಯಾಕ್ ಮಾಡಿದ ಆಪಲ್ ಜ್ಯೂಸ್‌ಗಳಿಂದ ದೂರವಿರುವುದು ಉತ್ತಮ. ಈ ಪ್ಯಾಕೇಜ್ಡ್ ಜ್ಯೂಸ್‌ಗಳಲ್ಲಿ ಅತಿ ಹೆಚ್ಚು ಸಕ್ಕರೆ ಇದ್ದು, ಅದು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು.