ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಶ್ನಿಸಿ ಸಲ್ಲಿಕೆ ಮಾಡಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಗುರುವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.
NGO ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು.
ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ಪ್ರಶಾಂತ್ ಭೂಷಣ್ ಮತ್ತು ಗೋಪಾಲ್ ಶಂಕರನಾರಾಯಣ್ ಸೇರಿದಂತೆ ಖ್ಯಾತ ವಕೀಲರ ತಂಡವು ಮಂಡಿಸಿದ ವಾದಗಳು ಹಾಗೂ ಆಯೋಗದ ಪರ ಪ್ರತಿವಾದಗಳನ್ನು ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಅಂತಿಮ ವಿಚಾರಣೆಯನ್ನು ಮುಕ್ತಾಯಗೊಳಿಸಿತು.
ಕಳೆದ ವರ್ಷ ಆಗಸ್ಟ್ 12 ರಂದು ನ್ಯಾಯಾಲಯವು ಈ ವಿಚಾರವಾಗಿ ವಾದಗಳನ್ನು ಆಲಿಸಲು ಪ್ರಾರಂಭಿಸಿತ್ತು, ಆಗ ಮತದಾರರ ಪಟ್ಟಿಗಳಲ್ಲಿ ಹೆಸರುಗಳನ್ನು ಸೇರಿಸುವುದು ಅಥವಾ ಹೊರಗಿಡುವುದು ಭಾರತೀಯ ಚುನಾವಣಾ ಆಯೋಗದ ಸಾಂವಿಧಾನಿಕ ವ್ಯಾಪ್ತಿಗೆ ಬರುತ್ತದೆ ಎಂಬ ವಿಚಾರವನ್ನು ಪೀಠ ಗಮನಿಸಿತ್ತು. ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಸಮರ್ಥನೆ ಮಾಡಿಕೊಂಡಿತ್ತು.
ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರು ಸೇರ್ಪಡೆ ಮಾಡಲು 12ನೇ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 8, 2025 ರಂದು ಸೂಚನೆ ನೀಡಿತ್ತು.
ಆ ಸಮಯದಲ್ಲಿ ನಡೆದ ವಿಚಾರಣೆಯ ವೇಳೆ ಆರ್‌ಜೆಡಿ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಇತರ ಅರ್ಜಿದಾರರು, ಬಿಹಾರ ಮತದಾರರ ವಿಶೇಷ ಪರಿಷ್ಕರಣೆಯಲ್ಲಿ ಆಧಾರ್ ಕಾರ್ಡ್ ಅನ್ನು 12ನೇ ದಾಖಲೆಯಾಗಿ ಸೇರಿಸಲು ಇಸಿಐಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಅರ್ಜಿದಾರರು ಸಲ್ಲಿಸುವ ಆಧಾರ್ ಅನ್ನು ನಿವಾಸ ಮತ್ತು ಗುರುತಿನ ಪುರಾವೆಯಾಗಿ ಪರಿಗಣಿಸಬೇಕು. ಅದನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಬೇಕೆಂದು ಒತ್ತಾಯಿಸುತ್ತಿಲ್ಲ ಎಂದು ಮನವಿ ಮಾಡಿದ್ದರು.



