ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಕೋವಿಡ್ ಲಸಿಕೆಯಿಂದ ಹೃದಯಾಘಾತ ಪ್ರಕರಣಗಳು ಸಂಭವಿಸಿವೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.
ಯುವಜನರೂ ಸೇರಿದಂತೆ ಹೃದಯಾಘಾತದಿಂದ ಹಠಾತ್ ಸಾವುಗಳು ಸಂಭವಿಸುತ್ತಿರುವುದರ ಕುರಿತು ಪರಿಣತರ ತಂಡ ಅಧ್ಯಯನ ನಡೆಸಿ ವರದಿ ನೀಡಿದೆ. ಹೃದಯಾಘಾತಕ್ಕೆ ಧೂಮಪಾನ, ಆಹಾರ ಹಾಗೂ ಜೀವನಶೈಲಿ, ಮಾಲಿನ್ಯ, ಆರೋಗ್ಯ ಸ್ಥಿತಿಗತಿ, ಹೃದಯದ ಆರೋಗ್ಯ ಮೇಲೆ ಪ್ರಭಾವ ಬೀರಿವೆ ಎನ್ನುವ ಸಂಗತಿಯನ್ನು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಉಳಿದ ಭಾಗಗಳಿಗಿಂತ ಹೆಚ್ಚಿನ ಹೃದಯಾಘಾತ ಪ್ರಕರಣಗಳು ದಾಖಲಾಗಿವೆ.
ಈ ಬಗ್ಗೆ ಸರ್ಕಾರ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದು, ಸಾರ್ವಜನಿಕರಿಗೆ ಹೃದಯದ ಆರೋಗ್ಯ ಸಂಬಂಧ ಅರಿವು ಮೂಡಿಸಲಾಗುವುದು. ಹಠಾತ್ ಸಾವುಗಳನ್ನು ಗುರುತಿಸಿ ಮರಣೋತ್ತರ ಪರೀಕ್ಷೆಗೆ ಕ್ರಮ ವಹಿಸಲಾಗುವುದು, 15 ವರ್ಷ ಒಳಪಟ್ಟ ಮಕ್ಕಳಿಗೆ ಹೃದಯ ತಪಾಸಣೆಗೆ ಒತ್ತು ನೀಡುವ ಜೊತೆಗೆ ಎಲ್ಲಾ ಖಾಸಗಿ ಸಂಸ್ಥೆಗಳು ವರ್ಷಕ್ಕೆ ಒಮ್ಮೆಯಾದರೂ ತಮ್ಮೆಲ್ಲ ಉದ್ಯೋಗಿಗಳಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಬೇಕು ಎಂದು ತಿಳಿಸಿದ್ದಾರೆ.