ವೆಂಟ್ರಿಕ್ಯುಲರ್ ಸೆಪ್ಟಲ್ ರಪ್ಚರ್ ಎಂಬ ಹೃದಯ ಸಮಸ್ಯೆ: ಕೆಎಂಸಿ ಆಸ್ಪತ್ರೆಯಲ್ಲಿ ವ್ಯಕ್ತಿಯ ಯಶಸ್ವಿ ಶಸ್ತ್ರಚಿಕಿತ್ಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಂಟ್ರಿಕ್ಯುಲರ್ ಸೆಪ್ಟಲ್ ರಪ್ಚರ್ (ವಿಎಸ್ಆರ್) ಎಂಬ ಮಾರಣಾಂತಿಕ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಇದೊಂದು ಅಪರೂಪದ ಸಮಸ್ಯೆಯಾಗಿದ್ದು ಸೂಕ್ತ ಸಮಯದಲ್ಲಿ ಸಮಸ್ಯೆಯನ್ನು ಗುರುತಿಸಿ , ಚಿಕಿತ್ಸೆ ನೀಡಿದ್ದು ವ್ಯಕ್ತಿ ಗುಣಮುಖರಾಗಿದ್ದಾರೆ.

ಕೆಎಂಸಿ ಆಸ್ಪತ್ರೆಯ ಕಾರ್ಡಿಯಾಕ್ ಸರ್ಜನ್ ಡಾ. ಹರೀಶ್ ರಾಘವನ್, ಕಾರ್ಡಿಯೊಥೊರೈಕಿಕ್ ಮತ್ತು ವ್ಯಾಸ್ಕ್ಯೂಲರ್ ಸರ್ಜನ್ ಡಾ. ಮಾಧವ್ ಕಾಮತ್ ಮತ್ತು ಕಾರ್ಡಿಯಾಕ್ ಸರ್ಜನ್ ಡಾ. ಐರೇಶ್ ಶೆಟ್ಟಿ, ಹಿರಿಯ ಇಂಟರ್ವೆನ್ಶನಲ್ ಕಾರ್ಡಿಯಾಲಾಜಿಸ್ಟ್ ಡಾ. ನರಸಿಂಹ ಪೈ ಹಾಗೂ ಅರವಳಿಕೆ ತಜ್ಞರ ತಂಡ ಡಾ. ರಾಮಮೂರ್ತಿ ರಾವ್, ಡಾ. ಪಂಚಾಕ್ಷರಿ ಪಾಟೀಲ್ ಮತ್ತು ಡಾ. ಸುನೀಲ್ ಅವರನ್ನೊಳಗೊಂಡ ಅನುಭವಿ ತಜ್ಞ ವೈದ್ಯರ ತಂಡ ಈ ಅಪರೂಪದ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಏನಿದು ಪ್ರಕರಣ?
ಎದೆ ನೋವಿನ ಸಮಸ್ಯೆಯಿಂದ 55 ವರ್ಷದ ವ್ಯಕ್ತಿಯೊಬ್ಬರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲ ಹಂತದ ಪರೀಕ್ಷೆಯಲ್ಲಿ ಕೊರೊನರಿ ಆರ್ಟರಿ ಡಿಸೀಸ್ (ಹೃದಯಕ್ಕೆ ರಕ್ತ ಪೂರೈಸುವ ನಾಳದಲ್ಲಿ ಬ್ಲಾಕೇಜ್) ಸಮಸ್ಯೆ ಕಂಡುಬಂದಿತ್ತು. ಬಳಿಕ ಯಶಸ್ವಿಯಾಗಿ ಅವರಿಗೆ ಆಂಜಿಯೋಪ್ಲಾಸ್ಟಿ ಕೂಡ ನಡೆಸಲಾಯಿತು. ಆದರೆ ಎದೆ ನೋವು ಮತ್ತಷ್ಟು ತೀವ್ರವಾಗಿತ್ತು. ಮುಂದಿನ ಹಂತದ ಪರೀಕ್ಷೆ ನಡೆಸಿದಾಗ ವ್ಯಕ್ತಿಗೆಹೃದಯಾಘಾತದ (ಮಯೋಕಾರ್ಡಿಯಲ್ ಇನ್ಫ್ರಾಕ್ಶನ್) ಜೊತೆಗೆ ವಿಎಸ್ಆರ್ (ವೆಂಟ್ರಿಕ್ಯುಲರ್ ಸೆಪ್ಟಲ್ ರಪ್ಚರ್ ) ಉಂಟಾಗಿರುವುದು ಪತ್ತೆಯಾಗಿದೆ . ಸಮಸ್ಯೆಯನ್ನು ಗುರುತಿಸಿದ ತಜ್ಞ ವೈದ್ಯರು ತಕ್ಷಣ ಕೃತಕ ಪ್ಯಾಚ್ ಮೂಲಕ ವೆಂಟ್ರಿಕ್ಯುಲರ್ ಸೆಪ್ಟಲ್ ರಪ್ಚರ್ ನ್ನು ಮುಚ್ಚಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು 5 ದಿನಗಳಲ್ಲೇ ವಾರ್ಡ್ಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಮಯದಲ್ಲಿ ವ್ಯಕ್ತಿಯು ಸಂಪೂರ್ಣ ಗುಣಮುಖರಾಗಿದ್ದರು.

ಶೇ.0.04–0.21 ರಷ್ಟು ರೋಗಿಗಳಲ್ಲಿ ಮಾತ್ರ ಕಾಣುವ ಸಮಸ್ಯೆ
ವೆಂಟ್ರಿಕ್ಯುಲರ್ ಸೆಪ್ಟಲ್ ರಪ್ಚರ್ (ವಿಎಸ್ಆರ್) ಬಹಳ ಅಪರೂಪದ ಹಾಗೂಜೀವಕ್ಕೆ ಕುತ್ತು ತರುವ ಸಮಸ್ಯೆಯಾಗಿದ್ದುಹೃದಯದ ಎಡ ಮತ್ತು ಬಲ ವೆಂಟ್ರಿಕಲ್ಸ್ ಬೇರ್ಪಡಿಸುವ ವಾಲ್ನಲ್ಲಿ ತೂತು ಕಾಣಿಸಿಕೊಳ್ಲುತ್ತದೆ.ಇದರಿಂದ ಅನಿಯಮಿತ ರಕ್ತಸ್ರಾವ ಉಂಟಾಗಿ ಹೃದಯ ಸ್ತಂಭನ (ಹಾರ್ಟ್ ಫೇಲ್ಯೂರ್)ಗೆ ಕಾರಣವಾಗುತ್ತದೆ. ಹೀಗಾಗಿ ಸಾವಿನ ಸಂಭವ ಅಧಿಕವಾಗಿರುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ಈ ತೂತು ಮುಚ್ಚುವುದೇ ಆಯ್ಕೆಯಾಗಿರುತ್ತದೆ. ಈ ಶಸ್ತ್ರಚಿಕಿತ್ಸೆ ಕೂಡ ಸಾಕಷ್ಟು ಕ್ಲಿಷ್ಟಕರವಾಗಿರುತ್ತದೆ.ಇದು ಹೃದಯಾಘಾತಕ್ಕೆ ಒಳಗಾದಶೇ.0.04–0.21 ರಷ್ಟು ರೋಗಿಗಳಲ್ಲಿ ಮಾತ್ರ ಕಾಣುವ ಸಮಸ್ಯೆಯಾಗಿದೆ.

ಚಿಕಿತ್ಸೆ ಕುರಿತು ಮಾತನಾಡಿದ ಡಾ. ಹರೀಶ್ ರಾಘವನ್, ‘ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿ ವಿಚಾರದಲ್ಲಿ ವೆಂಟ್ರಿಕ್ಯುಲರ್ ಸೆಪ್ಟಲ್ ರಪ್ಚರ್ ಜೊತೆಗೆ ಹೃದಯಾಘಾತ ( ಮಯೊಕಾರ್ಡಿಯಲ್ ಇನ್ಫ್ರಾಕ್ಶನ್) ಬಹಳ ಕ್ಲಿಷ್ಕರವಾದ ಸಮಸ್ಯೆ. ರೋಗಿಯನ್ನು ಗುಣಪಡಿಸಲು ಇದ್ದಿದ್ದು ಶೀಘ್ರ ಸಮಸ್ಯೆ ಪತ್ತೆ, ಶೀಘ್ರ ಶಸ್ತ್ರಚಿಕಿತ್ಸೆಹಾಗೂ ಎಲ್ಲಾ ತಜ್ಞ ವೈದ್ಯರ ಸಂಯೋಜಿತ ಕಾರ್ಯ. ಈ ಪ್ರಕರಣ ವಿವಿಧ ವಿಭಾಗದ ಸಂಯೋಜಿತ ಕೆಲಸವನ್ನು ಬಿಂಬಿಸುತ್ತದೆ’ ಎಂದರು.

ಈ ಕುರಿತು ಮಾತನಾಡಿದ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣಾ ಅಧಿಕಾರಿ ಮತ್ತು ಆಸ್ಪತ್ರೆ ನಿರ್ದೇಶಕ ಶ್ರೀ ಸಘೀರ್ ಸಿದ್ಧಿಕಿ, ಈ ಪ್ರಕರಣವು ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುವ ಮುಂದುವರಿದ ಹೃದಯ ಆರೈಕೆ ಪರಿಣತಿಯನ್ನು ಒತ್ತಿಹೇಳುತ್ತದೆ ಕೆಎಂಸಿ ಆಸ್ಪತ್ರೆಯಲ್ಲಿ ಪೂರ್ಣಾವಧಿಯ ಹೃದ್ರೋಗ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ಹೃದಯ ಎಲೆಕ್ಟ್ರೋಫಿಸಿಯಾಲಜಿಸ್ಟ್ಗಳು ಮತ್ತು ಎರಡು ಕ್ಯಾತ್ ಲ್ಯಾಬ್ಗಳಿವೆ. ಹೃದಯಾಘಾತದ ಅತ್ಯಂತ ಮಾರಕ ತೊಡಕುಗಳನ್ನ ಎದುರಿಸುತ್ತಿರುವ ರೋಗಿಯನ್ನು ಉಳಿಸಲು ಸರಾಗವಾಗಿ ಕೆಲಸ ಮಾಡಿದ ನಮ್ಮ ವೈದ್ಯರು ಮತ್ತು ಸಹಾಯಕ ಸಿಬ್ಬಂದಿಯ ತಂಡಕ್ಕೆ ನಾವು ಹೆಮ್ಮೆಪಡುತ್ತೇವೆ. ನಮ್ಮ ರೋಗಿಗಳಿಗೆ ವಿಶ್ವ ದರ್ಜೆಯ ಆರೋಗ್ಯ ರಕ್ಷಣೆ ಮತ್ತು ಜೀವ ಉಳಿಸುವ ಮಧ್ಯಸ್ಥಿಕೆಗಳನ್ನು ಒದಗಿಸುವುದು ನಮ್ಮ ಬದ್ಧತೆಯಾಗಿದೆ’ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!