ಹೊಸ ದಿಗಂತ ವರದಿ,ದಾವಣಗೆರೆ:
ನವಜಾತ ಹೆಣ್ಣು ಶಿಶುವಿನ ಕೊರಳಿಗೆ ಹಗ್ಗ ಕಟ್ಟಿ ಸಾಯಿಸಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ ಅಮಾನವೀಯ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕು ಕ್ಯಾಸನಕೆರೆ ಗ್ರಾಮದಲ್ಲಿ ವರದಿಯಾಗಿದೆ.
ಗ್ರಾಮದ ಸಮೀಪ ಆಗಷ್ಟೇ ಜನಿಸಿದಂತಿರುವ ಹೆಣ್ಣು ಶಿಶುವು ಕುತ್ತಿಗೆಗೆ ಹಗ್ಗ ಬಿಗಿದು, ಕೊಲೆ ಮಾಡಿ ಬಿಸಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಳ್ಳು ಕಂಟಿಗಳಲ್ಲಿ ಬಿದ್ದಿದ್ದ ಹೆಣ್ಣು ಶಿಶುವನ್ನು ಗುರುತಿಸಿದ ಸ್ಥಳೀಯರು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸಾಸ್ವೇಹಳ್ಳಿ ಉಪ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಹೆಣ್ಣು ಶಿಶುವನ್ನು ಕೊಲೆ ಮಾಡಿ ಬಿಸಾಡಿದವರು ಕೂಸಿನ ಹೆತ್ತವರೋ, ಸಂಬಂಧಿಗಳೋ ಎಂಬುದು ಬಯಲಾಗಬೇಕಿದೆ.
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿಗಳಾದ ವೀರೇಶ, ಸಿದ್ದೇಶ ಸಹ ಇದೇ ಕ್ಯಾಸಿನಕೆರೆ ಗ್ರಾಮದವರು. ಇದೀಗ ಅದೇ ಆರೋಪಿಗಳ ಊರಿನಲ್ಲಿ ಹೆಣ್ಣು ನವಜಾತ ಶಿಶುವಿನ ಕೊರಳಿಗೆ ಹಗ್ಗ ಬಿಗಿದು, ಕೊಲೆ ಮಾಡಿ ಬಿಸಾಡಿರುವ ಪೈಶಾಚಿಕ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ನವಜಾತ ಶಿಶುವನ್ನು ಕೊಲೆ ಮಾಡಿ, ಬಿಸಾಡಿದ ದುಷ್ಕರ್ಮಿಗಳು, ಕುಟುಂಬಕ್ಕಾಗಿ ಶೋಧ ನಡೆಸಿದೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.