ನನಗೆ ಆಶೀರ್ವಾದ ಮಾಡಿದ ಎಲ್ಲರಿಗೂ ಹೃದಯಾಂತರಾಳದ ಧನ್ಯವಾದ: ವಾರಾಣಸಿಯಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿದ್ದಾರೆ.

ವಾರಾಣಸಿಯಲ್ಲಿ ನಡೆದ ಕಿಸಾನ್ ಸಮ್ಮೇಳನದಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯೋಜನೆಯ 20 ಸಾವಿರ ಕೋಟಿ ರೂಪಾಯಿಯನ್ನು ದೇಶದ 9.26 ಕೋಟಿ ರೈತರ ಖಾತೆಗಳಿಗೆ ಜಮೆ ಮಾಡಿದ ಬಳಿಕ ಅವರು ಮಾತನಾಡಿದರು. ‘ಲೋಕಸಭೆ ಚುನಾವಣೆಯಲ್ಲಿ ನೀವು ನನ್ನನ್ನು ಮೂರನೇ ಬಾರಿಗೆ ಸಂಸದನಾಗಿ ಮಾತ್ರವಲ್ಲ, ಮೂರನೇ ಬಾರಿಗೆ ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದೀರಿ. ನಿಮಗೆ ನನ್ನ ಧನ್ಯವಾದಗಳು’ ಎಂದು ಹೇಳಿದರು.

ಕಳೆದ 60 ವರ್ಷದಲ್ಲಿಯೇ ದೇಶದಲ್ಲಿ ಯಾವುದೇ ಪಕ್ಷದ ಸರ್ಕಾರವನ್ನು ಸತತ ಮೂರನೇ ಬಾರಿಗೆ ಆಯ್ಕೆ ಮಾಡಿರಲಿಲ್ಲ. ಆದರೆ, ದೇಶದ ಜನರು ನನ್ನನ್ನು ಸತತ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾರೆ. ವಾರಾಣಸಿಯ ಜನರೂ ನನ್ನ ಜತೆ ನಿಂತಿದ್ದಾರೆ. ಇದು ಐತಿಹಾಸಿಕವಾಗಿದ್ದು, ಮುಂದಿನ 5 ವರ್ಷಗಳವರೆಗೆ ನಿಮ್ಮ ಸೇವೆ ಮಾಡುತ್ತೇನೆ. ವಿಕಸಿತ ಭಾರತದ ನಿರ್ಮಾಣಕ್ಕಾಗಿ ಶ್ರಮ ವಹಿಸುತ್ತೇನೆ. ರೈತರು, ಯುವಕರು ಹಾಗೂ ಮಹಿಳೆಯರು ದೇಶದ ಮೂರು ಸ್ತಂಭಗಳಾಗಿದ್ದು, ಇವರೆಲ್ಲರ ಏಳಿಗೆಗೆ ಆಡಳಿತ ನಡೆಸುತ್ತೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ದೇಶದ 9.26 ಕೋಟಿ ರೈತರಿಗೆ ಹಣಕಾಸು ನೆರವು ನೀಡುವ ಕಡತಕ್ಕೆ ನಾನು ಮೊದಲು ಸಹಿ ಹಾಕಿದೆ. ಆ ಮೂಲಕ ರೈತರಿಗೆ ಅನುಕೂಲ ಮಾಡುವುದು ನಮ್ಮ ಉದ್ದೇಶವಾಗಿತ್ತು. ಇನ್ನು ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಬಡವರಿಗೆ 3 ಕೋಟಿ ಬಡವರಿಗೆ ಮನೆ ನಿರ್ಮಿಸುವ ಕುರಿತು ಕೂಡ ತೀರ್ಮಾನಿಸಲಾಗಿದೆ. ಲಕ್‌ಪತಿ ದೀದಿ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ರೈತರು ಸಕಲ ರೀತಿಯಲ್ಲಿ ಏಳಿಗೆ ಹೊಂದಲಿದ್ದಾರೆ ಎಂದರು.

ಮೂರನೇ ಅವಧಿಯಲ್ಲಿ ದೇಶದ ಏಳಿಗೆಗೆ ಜತೆಗೆ ವಾರಾಣಸಿಯನ್ನೂ ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದು. ಕಾಶಿ ವಿಶ್ವನಾಥನ ಕೃಪಾಶೀರ್ವಾದದಿಂದ ಮುಂದಿನ ವರ್ಷಗಳಲ್ಲಿಯೂ ಏಳಿಗೆಗೆ ಶ್ರಮ ವಹಿಸುತ್ತೇವೆ. ನನಗೆ ಆಶೀರ್ವಾದ ಮಾಡಿದ ಎಲ್ಲರಿಗೂ ಮತ್ತೊಮ್ಮೆ ಹೃದಯಾಂತರಾಳದ ಧನ್ಯವಾದ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!