April 20, 2026
Monday, April 20, 2026
spot_img

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿ, ಗುಡುಗು ಸಹಿತ ಭಾರೀ ಮಳೆ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹತ್ತು ಹಲವು ದಿನಗಳಿಂದ ಬಿಸಿಲ ಬೇಗೆಯಿಂದ ಬಳಲಿದ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸೋಮವಾರ ಸಂಜೆ ಸುರಿದ ಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಉತ್ತಮ ಮಳೆ ಸಂತಸ ಮೂಡಿಸಿದೆ.

ಸಂಜೆಯಾಗುತ್ತಿದ್ದಂತೆಯೇ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಬ್ರಹ್ಮಣ್ಯ ಮೊದಲಾದ ಕಡೆಗಳಲ್ಲಿ ಸುರಿಯಲಾರಂಭಿಸಿದ ಮಳೆ ಬೇಸಿಗೆಯ ತಾಪಮಾನದಿಂದ ಬಳಲುತ್ತಿದ್ದ ಜನರನ್ನು ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿತು.

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ
ಬೆಳ್ತಂಗಡಿ ತಾಲೂಕಿನಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಹಾನಿಯೂ ಸಂಭವಿಸಿದ್ದು, ಉಜಿರೆ- ಕೊಕ್ಕಡ ರಸ್ತೆಯ ಉಜಿರೆಯ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಬೃಹತ್ ಗಾತ್ರದ ರೆಂಬೆಯೊಂದು ಮುರಿದುಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮುಂಡಿ ನಗರ ಪರಿಸರದಲ್ಲೂ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ದಿಡುಪೆ-ಮುಂಡಾಜೆ ರಸ್ತೆಯ ಕುರುಡ್ಯ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ವ್ಯತ್ಯಯ ಉಂಟಾಯಿತು. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ನೂರಾರು ಅಡಕೆ,ರಬ್ಬರ್ ಗಿಡಗಳು ಧರಾಶಾಹಿಯಾಗಿವೆ. ಅಲ್ಲಲ್ಲಿ ರಸ್ತೆ ಮೇಲೆ ಮಳೆ ನೀರು ಹರಿದು ವಾಹನ ಸವಾರರು ಪರದಾಡುವಂತಾಯಿತು.

ಅಂಬಡಬೆಟ್ಟು ತಾತ್ಕಾಲಿಕ ರಸ್ತೆ ಕುಸಿತ
ಉಜಿರೆ ಮತ್ತು ಇಂದಬೆಟ್ಟು ರಸ್ತೆಯ ಸಂಪರ್ಕ ಕೊಂಡಿಯಾಗಿರುವ ಅಂಬಡಬೆಟ್ಟು ಎಂಬಲ್ಲಿ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಭಾರಿ ಮಳೆಗೆ ಕುಸಿದಿದೆ. ಇಲ್ಲಿ ಘನ ವಾಹನಗಳು ಓಡಾಡದ ಪರಿಸ್ಥಿತಿ ಎದುರಾಗಿದೆ. ದ್ವಿಚಕ್ರ ವಾಹನ ಚಾಲಕರು ಕೇಸರಿನಿಂದ ಎದ್ದು ಬಿದ್ದು ಓಡಾಡುವ ಪರಿಸ್ಥಿತಿ ಎದುರಾಗಿದೆ.

ಮೂಡುಬಿದಿರೆಯಲ್ಲಿ ಇಳೆಗೆ ತಂಪೆರೆದ ಮಳೆ
ಮೂಡುಬಿದಿರೆ ತಾಲೂಕಿನಲ್ಲೂ ಗುಡುಗು ಸಿಡಿಲಾರ್ಭಟಗಳೊಂದಿಗೆ ಮಳೆಯಾಗಿದೆ. ಭಾರೀ ಬಿಸಿಲ ಝಳದಿಂದ ಕಂಗೆಟ್ಟಿದ್ದ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಸಂಜೆ ೪ರ ಸುಮಾರಿಗೆ ಏಕಾಏಕಿ ಮೋಡ ಮುಸುಕಿ ಮಳೆ ಸುರಿದಿದೆ. ಗುಡುಗು ಸಿಡಿಲಾರ್ಭಟ, ಗಾಳಿಯಬ್ಬರ ಜೋರಾಗಿತ್ತು.

ಏಕಾಏಕಿ ಸುರಿದ ಮಳೆಗೆ ಜನತೆ ಕೊಂಚ ತೊಂದರೆಗೊಳಗಾದರು. ದ್ವಿಚಕ್ರ ವಾಹನ ಚಾಲಕರು ಸಹಿತ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.ಮಳೆ ಜೋರಾದ ಬಿದ್ದ ಕಾರಣ ಮೂಡುಬಿದಿರೆಯ ಪಟ್ಟಣದೊಳಗೂ, ಕೆಇಬಿ, ಮಹಾವೀರ ಕಾಲೇಜು ಪರಿಸರಗಳಲ್ಲಿ ರಸ್ತೆಯ ತುಂಬೆಲ್ಲಾ ನೀರು ಹರಿದು ತೊಂದರೆಯುಂಟಾಯಿತು.

ಚರಂಡಿಗಳಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆ ಆಗಿದ್ದು, ರಸ್ತೆಯುದ್ದಕ್ಕೂ ಮಳೆ ನೀರು ಹರಿಯುತ್ತಾ ವಾಹನ ಚಾಲಕರು ತೊಂದರೆ ಅನುಭವಿಸಿದರು. ರಾತ್ರಿಯ ತನಕವೂ ಸಣ್ಣ ಪ್ರಮಾಣದಲ್ಲಿ ಮಳೆ ಮುಂದುವರಿದಿದೆ. ಮೊದಲ ಮಳೆಗೆ ವಿದ್ಯುತ್ ಕೈಕೊಟ್ಟಿದೆ. ಸಿಡಿಲು ಗುಡುಗಳಾರ್ಭಟದೊಂದಿಗೆ ಮಳೆಯಾಗುತ್ತಿದ್ದಂತೆಯೇ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೊದಲ ಮಳೆಗೆ ಹೀಗಾದರೆ ಮಳೆಗಾಲದಲ್ಲಿ ಇನ್ನೇನು ಎಂಬ ಪ್ರಶ್ನೆ ಉದ್ಭವಿಸಿದೆ.

ಬಂಟ್ವಾಳದಲ್ಲಿ ಗಾಳಿ ಮಳೆಗೆ ರಸ್ತೆಗೆ ಉರುಳಿದ ಮರ
ಬಂಟ್ವಾಳ ತಾಲೂಕಿನ ಸುತ್ತಮುತ್ತ ಗಾಳಿ ಮಳೆ ಸುರಿದಿದ್ದು, ಇರ್ವತ್ತೂರುಪದವು ಎಂಬಲ್ಲಿ ಬೃಹತ್ ಗಾತ್ರದ ಮರ ರಸ್ತೆಗೆ ಅಡ್ಡ ಬಿದ್ದ ಕೆಲ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳೀಯರು ಕೂಡಲೇ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಇತ್ತ ರೈಲ್ವೇ ಕಿರು ಸೇತುವೆ ಸಮೀಪ ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಪ್ಲೆಕ್ಸ್ ವೊಂದು‌ಧರಾಶಾಹಿಯಾಗಿದೆ. ಗಾಳಿ, ಮಳೆಗೆ ಕೆಲ ಹೊತ್ತು ವಿದ್ಯುತ್ ಕೂಡ ಕಡಿತಗೊಂಡಿತ್ತು.

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಗ್ರಾಮೀಣ ಭಾಗಗಳಲ್ಲಿ ಗುಡುಗು ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಸುರಿದಿದ್ದು , ಈ ಮಳೆಯು ಧಗೆಯಿಂದ ಕುದಿಯುತ್ತಿದ್ದ ಇಳೆಗೆ ತಂಪೆರೆಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !