ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನಲ್ಲಿ ಸತತ ಮೂರನೇ ದಿನವೂ ಮಳೆ ಮುಂದುವರಿದಿದ್ದು ಮಳೆ ನೀರಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಯುವಕನೋರ್ವ ಮೃತ ಪಟ್ಟ ಘಟನೆ ಅವರ್ಸಾದ ದಂಡೇಬಾಗ ಬಳಿ ಗುರುವಾರ ಮದ್ಯಾಹ್ನ ಸಂಭವಿಸಿದೆ.
ಅವರ್ಸಾ ದಂಡೇಬಾಗ ಬೇಟೆನಾಸ ದೇವಾಲಯದ ಸಮೀಪದ ನಿವಾಸಿ ಮಹಾಂತೇಶ ದೇವೇಂದ್ರ ಬಾನಾವಳಿಕರ(25) ಮೃತ ಯುವಕನಾಗಿದ್ದು ಮುಂಬೈನಲ್ಲಿ ಸಣ್ಣ ಕೆಲಸ ಮಾಡಿಕೊಂಡು ತನ್ನ ತಂದೆಗೆ ಆಸರೆಯಾಗಿದ್ದ ಈತ ಒಂದು ದಿನದ ಹಿಂದಷ್ಟೇ ರಜೆ ಹಾಕಿ ಊರಿಗೆ ಬಂದಿದ್ದ ಎನ್ನಲಾಗಿದೆ.
ಮನೆಯಿಂದ ಹೊರಗೆ ತೆರಳಿದವನು ಮದ್ಯಾಹ್ನ ಊಟಕ್ಕೆ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ವಿದ್ಯುತ್ ತಂತಿ ತುಂಡಾಗಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬಿದ್ದಿರುವುದು ಗಮನಕ್ಕೆ ಬಾರದೇ ವಿದ್ಯುತ್ ತಂತಿ ತುಳಿದು ವಿದ್ಯುತ್ ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಅದೇ ಸ್ಥಳದಲ್ಲಿ ದೊಡ್ಡ ಹೋರಿಯೊಂದು ಸಹ ವಿದ್ಯುತ್ ಆಘಾತದಿಂದ ಸತ್ತು ಬಿದ್ದಿದೆ.
ವ್ಯಕ್ತಿ ಮತ್ತು ಎತ್ತು ಬಿದ್ದಿರುವುದನ್ನು ಕಂಡ ಸ್ಥಳೀಯ ಜನರಿಗೆ ವಿದ್ಯುತ್ ತಂತಿ ತುಂಡಾಗಿರುವುದು ಗಮನಕ್ಕೆ ಬಂದಿದ್ದು ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವಿದ್ಯುತ್ ಆಘಾತಕ್ಕೊಳಗಾದ ವ್ಯಕ್ತಿಯನ್ನು ಸ್ಥಳೀಯ ಯುವಕನ ಆಟೋ ರಿಕ್ಷಾ ಮೂಲಕ ರಾಷ್ಟ್ರೀಯ ಹೆದ್ದಾರಿ ವರೆಗೆ ತಂದು ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು , ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ಆತ ಮೃತ ಪಟ್ಟಿರುವುದಾಗಿ ದೃಡಪಡಿಸಿದ್ದಾಗಿ ತಿಳಿದು ಬಂದಿದೆ.
ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ಮಹಾಂತೇಶನನ್ನೇ ಅವಲಂಬಿಸಿದ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.