ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಇದರ ನಡುವೆ ಇಲ್ಲಿನ ರಾಯಗಢ ಕೋಟೆಯಲ್ಲಿ ತೀವ್ರವಾದ ನೀರಿನ ತೊರೆಗಳಿಗೆ ಪ್ರವಾಸಿಗರು ತತತ್ತರಿಸಿ ಹೋಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಈ ಧಾರಾಕಾರ ಮಳೆಗೆ ಐತಿಹಾಸಿಕ ಸ್ಥಳದಲ್ಲಿ ಅಪಾಯಕಾರಿ ಪರಿಸ್ಥಿತಿಗಳು ಉಂಟಾಗಿವೆ. ಜನಪ್ರಿಯ ಪ್ರವಾಸಿ ತಾಣವಾದ ರಾಯಗಢ ಕೋಟೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಕೋಟೆಯ ಮೆಟ್ಟಿಲುಗಳು ನೀರಿನಿಂದ ಜಲಪಾತಗಳಾಗಿ ಪರಿವರ್ತನೆಯಾಗಿವೆ. ಮತ್ತು ಕೋಟೆಯ ಮೆಟ್ಟಿಲಿನಿಂದ ಇಳಿಯುವುದು ತುಂಬಾ ಕಷ್ಟಕರವಾಗಿದೆ. ಹಾಗಾಗಿ ಕೋಟೆಗೆ ಭೇಟಿ ನೀಡಿದ್ದ ಶಿವ ಭಕ್ತರು ಮತ್ತು ಪ್ರವಾಸಿಗರೂ ಸೇರಿದಂತೆ 30ಕ್ಕೂ ಹೆಚ್ಚು ಜನರು ಈ ನೀರಿನ ತೊರೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಭಯಗೊಂಡಿದ್ದಾರೆ. ಆದರೆ ಈ ಪ್ರವಾಸಿಗರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮುಖ್ಯ ಮೆಟ್ಟಿಲುಗಳ ಮೇಲಿನ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಸಾಗಿ ದುರಂತದಿಂದ ಪಾರಾಗಿದ್ದಾರೆ.
ಸಿಕ್ಕಿಬಿದ್ದ ಎಲ್ಲಾ ವ್ಯಕ್ತಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಭಾರೀ ಮಳೆಯ ಸಮಯದಲ್ಲಿ ಕೋಟೆಗಳು ಮತ್ತು ಇತರ ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ.
ಭಾರೀ ಮಳೆಗೆ ರಾಯಗಢ ಮಾತ್ರವಲ್ಲ ಮುಂಬೈ, ಥಾಣೆ, ನವೀ ಮುಂಬೈ ಮತ್ತು ಕಲ್ನೈ ಸೇರಿದಂತೆ ಮಹಾರಾಷ್ಟ್ರದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.