ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇದಾರನಾಥನ ಯಾತ್ರೆ ತೆರಳಲು ಯೋಚಿಸುವವರು ಇಲ್ಲಿ ಗಮನಿಸಿ.. ಸದ್ಯಕ್ಕೆ ಕೇದಾರನಾಥನ ದರುಶನ ಪಡೆಯಲು ಮುಂದಾಗಿರುವ ಭಕ್ತರಿಗೆ ದರುಶನ ಭಾಗ್ಯವಿಲ್ಲ.
ಯಾಕೆಂದರೆ ರುದ್ರಪ್ರಯಾಗ್ ಜಿಲ್ಲಾಧಿಕಾರಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ.
ಹೌದು, ರುದ್ರಪ್ರಯಾಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೇದಾರನಾಥ ಯಾತ್ರೆ ರದ್ದುಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಯಾರೂ ಕೇದಾರನಾಥ ಯಾತ್ರೆ ಕೈಗೊಳ್ಳದಂತೆ ರುದ್ರಪ್ರಯಾಗ್ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಸೂಚನೆ ನೀಡಿದ್ದಾರೆ.
ಉತ್ತರಖಂಡದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ಕೇದಾರನಾಥನ ಕ್ಷೇತ್ರವಿರುವ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಪ್ರವಾಹ ಸೃಷ್ಟಿಸಿದೆ. ಹೀಗಾಗಿ ಯಾತ್ರಿಕರ ಸುರಕ್ಷತಾ ದೃಷ್ಟಿಯಿಂದ ಕೇದಾರನಾಥ ಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಉತ್ತರಖಂಡ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರಿಗೂ ಸೂಚನೆ ನೀಡಲಾಗಿದೆ.
ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ, ರಕ್ಷಣಾ ತಂಡದ ಜೊತೆ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಆಗುತ್ತಿರುವ ಮಳೆ ಹಾಗೂ ಮುನ್ನಚ್ಚೆರಿಕಾ ಕ್ರಮಗಳ ಕುರಿತು ಚರ್ಚಿಸಿದ್ದಾರೆ.ಇನ್ನೂ ಕೆಲ ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಉತ್ತರಖಂಡದಲ್ಲಿ ಪರಿಸ್ಥಿತಿ ಅವಲೋಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.