ಹೊಸದಿಗಂತ ವರದಿ ಹಾಸನ :
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದವರಿದ ವರುಣನ ಅಬ್ಬರಕ್ಕೆ ನಾನಾ ರೀತಿಯ ಅವಾಂತರ ಸೃಷ್ಟಿಸಿದೆ
ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಅತ್ತಿಹಳ್ಳಿ ಗ್ರಾಮದಲ್ಲಿ ಲಲಿತಾ-ಸುಬ್ರಮಣ್ಯ ಎಂಬುವವರಿಗೆ ಸೇರಿದ ವಾಸದ ಮನೆ ಬಾರಿ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಮನೆ ಕಳೆದುಕೊಂಡು ಬೀದಿ ಪಾಲಾದ ಮಹಿಳೆ ಉಳಿದಿರುವ ಮನೆ ಗೋಡೆ ಉಳಿಸಿಕೊಳ್ಳಲು ಟಾರ್ಪಲ್ ಮುಚ್ಚಿ ಮಳೆಯಿಂದ ಗೋಡೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವಂತೆ ಒತ್ತಾಯಿಸಿರುವ ಅವರು ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಸೇತುವೆ ಮೇಲೆ ಹರಿಯುತ್ತಿರುವ ನೀರು : ಸಕಲೇಶಪುರ ತಾಲ್ಲೂಕಿನ, ಬಾಣಗೇರಿ ಗ್ರಾಮದ ಬಳಿಯಿರುವ ಸೇತುವೆ ಮೇಲೆ ಬಾರಿ ಪ್ರಮಾಣದ ನೀರು ಹರಿಯುತ್ತಿದೆ. ಬಾಣಗೇರಿ-ಹೆತ್ತೂರು-ಬ್ಯಾಕರವಳ್ಳಿ-ವಣಗೂರು ಕೂಡು ರಸ್ತೆ ಸಂಪರ್ಕಸಿರುವ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತ ಉಂಟಾಗಿದೆ. ಬಾರಿ ಮಳೆಯಿಂದಾಗಿ ಸೇತುವೆ ಮೇಲೆ ಹರಿಯುತ್ತಿರುವ ನೀರಿನಿಂದ ಸಾರ್ವಜನಿಕರು, ವಾಹನಗಳ ಓಡಾಟಕ್ಕೆ ಅಡ್ಡಿಯಾಗಿದೆ
ರಸ್ತೆಗೆ ಅಡ್ಡಲಾಗಿ ಬಿದ್ದ ಮರ : ಸಕಲೇಶಪುರ ತಾಲ್ಲೂಕಿನ, ಬಿಸಿಲೆ ರಸ್ತೆಯಲ್ಲಿ ವಿದ್ಯುತ್ ತಂತಿ ಸಮೇತ ರಸ್ತೆ ಮೇಲೆ ಮರ ಬಿದ್ದಿರುವ ಘಟನೆ ನಡೆದಿದೆ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಬಿಸಿಲೆ ಸುತ್ತಮುತ್ತ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬಿಸಲೆ ಮಾರ್ಗವಾಗಿ ಸುಬ್ರಹ್ಮಣ್ಯ ಹೋಗುವ ರಸ್ತೆ ಬಂದ್ ಆಗಿದೆ.
ಹೇಮಾವತಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು : ಹಾಸನ ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾರಿ ಮಳೆ ಹಿನ್ನಲೆ ಜಿಲ್ಲೆಯ ಜೀವನದಿ ಹೇಮಾವತಿ ನದಿಗೆ ಇಂದು ಸಹ ಒಳಹರಿವು ಹೆಚ್ಚಿದೆ. ಒಂದೇ ದಿನಕ್ಕೆ 4,293 ಕ್ಯೂಸೆಕ್ ಒಳಹರಿವು ಹೆಚ್ಚಳ ವಾಗಿದೆ. 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಸದ್ಯ 22.478 ಟಿಎಂಸಿ ನೀರು ಸಂಗ್ರಹವಾಗಿದೆ
ಹೇಮಾವತಿ ಜಲಾಶಯಕ್ಕೆ 22105 ಕ್ಯೂಸೆಕ್ ಒಳಹರಿವು ಬರುತ್ತಿದ್ದು ನದಿಯಿಂದ 3,225 ಕ್ಯೂಸೆಕ್ ಹೊರಹರಿಸಲಾಗುತ್ತಿದೆ.