ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 4-5 ದಿನಗಳಿಂದ ಶೃಂಗೇರಿ, ಮೂಡಿಗೆರೆ, ಕಳಸ ತಾಲೂಕುಗಳಲ್ಲಿ ನಿರಂತರವಾಗಿ ಬಲವಾದ ಧಂಡಿ ಗಾಳಿ ಜತೆಗೆ ಧಾರಾಕಾರ ಮಳೆ ಸುರಿಯುತ್ತಿದೆ.
ಶೃಂಗೇರಿಯಲ್ಲಿ ಹಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಗುರುವಾರದ ಕೆರೆಕಟ್ಟೆಯಲ್ಲಿ 234.8 ಮಿ.ಮೀ ಮಳೆಯಾಗಿದೆ.
ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಸ್ನಾನಘಟ್ಟ ಹಾಗೂ ಕಪ್ಪೆ ಶಂಕರ ದೇವಸ್ಥಾನದ ಮೆಟ್ಟಿಲುಗಳು ಸಂಪೂರ್ಣ ನೀರಿನಲ್ಲಿ ಮುಳುಗಿವೆ. ಸ್ನಾನಘಟ್ಟದ ಬಳಿ ನದಿಗೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ.
ಗಾಳಿಗೆ ಮಲೆನಾಡಿನ ಹಲವೆಡೆ ಮರಗಳು ಉರುಳಿವೆ. ಇದರಿಂದ ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ-ಮಂಗಳೂರು ರಸ್ತೆಯಲ್ಲಿರುವ ಶೃಂಗೇರಿಯ ತ್ಯಾವಣ ಬಳಿ ಬುಧವಾರ ರಾತ್ರಿ ಮರವೊಂದು ಬಿದ್ದ ಪರಿಣಾಮ ಇಡೀ ರಾತ್ರಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಗುರುವಾರ ಬೆಳಿಗ್ಗೆ ಮರ ತೆರವುಗೊಳಿಸಿದ ಬಳಿ ವಾಹನಗಳ ಸಂಚಾರ ಪುನಾರಂಭಗೊಂಡಿತು.