ರಾಜ್ಯದಲ್ಲಿ ಭಾರೀ ಮಳೆ, ಇಂಧನ ಇಲಾಖೆಗೆ ಭಾರೀ ನಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರಿ ಮಳೆ ಹಾಗೂ ಬಿರುಗಾಳಿಯಿಂದಾಗಿ ರಾಜ್ಯದ ಹಲವೆಡೆ ಸಾವಿರಾರು ವಿದ್ಯುತ್ ಕಂಬಗಳು, ಪರಿವರ್ತಕಗಳು ಮತ್ತು ವಿದ್ಯುತ್‌ ಸರಬರಾಜು ಮಾರ್ಗಗಳಿಗೆ ಹಾನಿಯಾಗಿದ್ದು, ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಒಟ್ಟು 96.61 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಂಗಳವಾರ ಹೇಳಿದರು.

ಅತಿವೃಷ್ಟಿಯಿಂದ ಇಲಾಖೆಗೆ ಆಗಿರುವ ನಷ್ಟ ಮತ್ತು ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆಗಳ ಕುರಿತು ಇಲಾಖೆ ಹಾಗೂ ಎಲ್ಲಾ ಎಸ್ಕಾಂಗಳ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದ ಬಳಿಕ ಅವರು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಳೆ ಮತ್ತು ಗಾಳಿಯಿಂದ 53,816 ಕಂಬಗಳು, 3,924 ವಿದ್ಯುತ್‌ ಪರಿವರ್ತಕಗಳು, 1,120 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ. ಈ ಪೈಕಿ 51,119 ಕಂಬಗಳು, 3,918 ಪರಿವರ್ತಕಗಳು ಮತ್ತು 1,063 ಕಿ.ಮೀ. ಉದ್ದದ ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸಲಾಗಿದೆ ಎಂದರು.

ಚಿಕ್ಕಮಗಳೂರು, ಉಡುಪಿ, ಶಿವಮೊಗ, ಹಾಸನ, ಸಕಲೇಶಪುರ, ಕೊಡಗು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಈ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಗ್ಯಾಂಗ್‌ಮೆನ್‌, ಲೈನ್‌ಮೆನ್‌ ನೇಮಿಸುವುದರ ಜೊತೆಗೆ, ವಿದ್ಯುತ್ ಕಾಮಗಾರಿಗಳ ಗುತ್ತಿಗೆದಾರರ ನೆರವಿನೊಂದಿಗೆ ದುರಸ್ತಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!