ಹೊಸದಿಗಂತ ವರದಿ, ಕಾರವಾರ: :
ಗರಿಷ್ಠ ಮಟ್ಟ ತಲುಪುವ ಸ್ಥಿತಿಯಲ್ಲಿ ಇರುವ ಕದ್ರಾ ಜಲಾಶಯದಿಂದ ಒಟ್ಟು 50 ಸಾವಿರ ಕ್ಯೂಸೆಕ್ಸ ನೀರು ಹೊರ ಬಿಡಲಾಗಿದೆ.
ಜಲಾಶಯದ 6 ಗೇಟುಗಳ ಮೂಲಕ ಒಟ್ಟು 30 ಸಾವಿರ ಕ್ಯೂಸೆಕ್ಸ ನೀರು ಹೊರ ಬಿಡಲಾಗಿದ್ಧು ವಿದ್ಯುತ್ ಉತ್ಪಾದನೆಗೆ ಬಳಸಿ 21 ಸಾವಿರ ಕ್ಯೂಸೆಕ್ಸ ನೀರು ಬಿಡಲಾಗಿದೆ.
34 ಮೀಟರ್ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ನಿಗದಿಪಡಿಸಿದ ಮಟ್ಟದಲ್ಲಿ ನೀರು ಸಂಗ್ರಹಗೊಂಡಿದ್ದು ವ್ಯಾಪಕ ಪ್ರಮಾಣದಲ್ಲಿ ಒಳ ಹರಿವು ಇರುವ ಕಾರಣ ಹಂತ ಹಂತವಾಗಿ ನೀರು ಹೊರ ಬಿಡುವ ಪ್ರಕ್ರಿಯೆ ಕೆ.ಪಿ.ಸಿಯಿಂದ ಚಾಲನೆಯಲ್ಲಿದೆ.
ಶುಕ್ರವಾರ ಸಹ ಜಲಾಶಯದ ಎರಡು ಗೇಟುಗಳಿಂದ 5 ಸಾವಿರ ಕ್ಯೂಸೆಕ್ಸ ನೀರು ಹೊರಬಿಡಲಾಗಿತ್ತು.
ಯಾವುದೇ ಸಮಯದಲ್ಲಿ ಹೆಚ್ಚುವರಿ ನೀರು ಹೊರ ಬಿಡುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಆಗುವಂತೆ ಕಾಳಿ ನದಿಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಅವರು ಕೆ.ಪಿ.ಸಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕದ್ರಾ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.
ಪ್ರವಾಹ ಉಂಟಾದರೆ ದೋಣಿ ಮತ್ತು ಇತರ ವ್ಯವಸ್ಥೆ ಇಲ್ಲದಿರುವ ಕುರಿತು ಶಾಸಕ ಸತೀಶ ಸೈಲ್ ಆಕ್ರೋಶ ವ್ಯಕ್ತಪಡಿಸಿದ್ದು ಕೆ.ಪಿ.ಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೂಂಡಿದ್ದಾರೆ.
ಅಂಕೋಲಾ ತಾಲೂಕಿನಲ್ಲಿ ಮಳೆ ಗಾಳಿ ಮುಂದುವರಿದಿದ್ದು ಘಟ್ಟದ ಮೇಲೆ ಗಂಗಾವಳಿ ನದಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದು ಗಂಗಾವಳಿ ನದಿ ಪಾತ್ರದ ಜನರ ಆತಂಕಕ್ಕೆ ಕಾರಣವಾಗಿದೆ.
ಮಳೆ ಇದೇ ರೀತಿ ಮುಂದುವರಿದರೆ ಗಂಗಾವಳಿ ನದಿಗೆ ಪ್ರವಾಹ ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಾಲೂಕಿನ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಕಳೆದ ಐದು ದಿನಗಳಿಂದ ವಿದ್ಯುತ್ ಪೂರೈಕೆ ನಿಂತಿದ್ದು ವಿದ್ಯುತ್ ವ್ಯವಸ್ಥೆ ಇಲ್ಲದೇ ಅಚವೆ,ಚನಗಾರ, ಅಂಗಡಿಬೈಲ್ ಭಾಗದ ಜನತೆ ಪರದಾಡುವಂತಾಗಿದೆ.
ಮೊಬೈಲ್ ಪೋನುಗಳನ್ನು ಚಾರ್ಜ ಮಾಡಲು ಆಗದೇ ಸಂಪರ್ಕ ಸಂಹವನ ಇಲ್ಲದೆ ಬದುಕುವ ಪರಿಸ್ಥಿತಿ ಎದುರಾಗಿದೆ.
ಗುಡ್ಡಗಾಡು ಪ್ರದೇಶದ ಅನೇಕ ಕಡೆಗಳಲ್ಲಿ ಮರಗಳು ಮುರಿದು ಬಿದ್ದಿದ್ದು ಮಳೆಯಿಂದಾಗಿ ತೆರುವುಗೊಳಿಸಲು ಕಷ್ಟವಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.