August 26, 2026
Wednesday, August 26, 2026
spot_img

ಕರಾವಳಿಯಲ್ಲಿ ಭಾರಿ ಮಳೆಯ ಮುನ್ಸೂಚನೆ: ಉಡುಪಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರಾವಳಿ ಜಿಲ್ಲೆ ಉಡುಪಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹವಾಮಾನ ಇಲಾಖೆಯು ಜಿಲ್ಲಾದ್ಯಂತ ‘ಆರೆಂಜ್ ಅಲರ್ಟ್’ ನೀಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಜುಲೈ 25 ರ ಶನಿವಾರದಂದು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಅಧಿಕೃತ ಜ್ಞಾಪನಾ ಪತ್ರದ ಪ್ರಕಾರ, ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ (ಪಿಯು) ಕಾಲೇಜುಗಳು, ಡಿಪ್ಲೋಮಾ ಮತ್ತು ಐಟಿಐ ಸಂಸ್ಥೆಗಳಿಗೆ ಜುಲೈ 25 ರಂದು ಕಡ್ಡಾಯ ರಜೆ ಘೋಷಿಸಲಾಗಿದೆ.

ಪರಿಷ್ಕೃತ ಆದೇಶದ ಪ್ರಕಾರ, ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ (PG) ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಾವುದೇ ರಜೆ ಇರುವುದಿಲ್ಲ. ಈ ಹಂತದ ತರಗತಿಗಳು ಎಂದಿನಂತೆ ನಡೆಯಲಿವೆ.

 ಜಿಲ್ಲಾಡಳಿತದ ಎಚ್ಚರಿಕೆಗಳು:

ಮಳೆಯ ಕಾರಣದಿಂದ ರಜೆ ನೀಡಿ ನಷ್ಟವಾಗಿರುವ ಕಲಿಕಾ ಸಮಯವನ್ನು ಸರಿದೂಗಿಸಲು ಶನಿವಾರದ ಮಧ್ಯಾಹ್ನ ಅಥವಾ ಮುಂಬರುವ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಕಾಲೇಜುಗಳು ಆರಂಭವಾಗುವ ಅಥವಾ ಮುಕ್ತಾಯದ ವೇಳೆಯಲ್ಲಿ ಮಳೆ ತೀವ್ರವಾಗಿದ್ದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ.

ದುರ್ಬಲ ಅಥವಾ ಹಳೆಯದಾದ ಶಾಲಾ ಕಟ್ಟಡಗಳನ್ನು ತರಗತಿ ನಡೆಸಲು ಬಳಸದಂತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ನದಿ, ಕೆರೆ, ತೋಡು, ಸಮುದ್ರ ತೀರ ಹಾಗೂ ಕಡಲ ಬದಿಯ ಮುಳುಗಡೆ ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಮತ್ತು ಜಾಗರೂಕರಾಗಿರುವಂತೆ ಎಚ್ಚರಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !