ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರು ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದ್ದು, ಮೈಸೂರು ರೋಡ್, ಉತ್ತರಹಳ್ಳಿ, ಆರ್.ಆರ್ ನಗರ, ಗೊಟ್ಟಿಗೆರೆ ಸುತ್ತಮುತ್ತ ಗುಡುಗು ಸಹಿತ ಮಳೆ ಸುರಿಯುತ್ತಿದೆ.
ಮೆಜೆಸ್ಟಿಕ್, ಮಲ್ಲೇಶ್ವರ, ಮಾಗಡಿ ರೋಡ್ , ಕೆ.ಆರ್ ಮಾರುಕಟ್ಟೆ ಸೇರಿದಂತೆ ಹಲವೆಡೆ ತುಂತುರು ಮಳೆ ಆರಂಭವಾಗಿದ್ದು, ಮಳೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಇದರ ನಡುವೆ ಮೇ 12, 13, 14, 15 ನಾಲ್ಕು ದಿನಗಳ ಕಾಲ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಲಘು ಪ್ರವಾಹ, ನೈಸರ್ಗಿಕ ಸಮಸ್ಯೆಗಳು ಎದುರಾಗುವ ಮುನ್ಸೂಚನೆ ಕೂಡ ನೀಡಿದೆ. ಇಂದಿನಿಂದ ಮೇ 15ರ ವರೆಗೆ ಬೆಂಗಳೂರಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಹೇಳಿಕೆ ನೀಡಿ, ರಾಜ್ಯದಲ್ಲಿ ಹಲವು ಕಡೆ ಮಳೆ ಆಗಿದೆ. ಧಾರವಾಡದಲ್ಲಿ 8cm ಮಳೆ, ದಕ್ಷಿಣ ಕನ್ನಡದಲ್ಲಿ 6 cm ಮಳೆ, ಬೆಳಗಾವಿ, ಚಿಕ್ಕಮಗಳೂರು 5 cm ಮಳೆ ಆಗಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ 16ವರೆಗೂ ಬಿರುಗಾಳಿ, ಗುಡುಗು, ಮಿಂಚು ಸಮೇತ ಮಳೆ ಆಗುವ ಸಾಧ್ಯತೆ. ಬೆಂಗಳೂರಿನಲ್ಲಿ ಮುಂದಿನ 5 ದಿನ ಬಿರುಗಾಳಿ ಸಮೇತ ಮಳೆ ಆಗುವ ಸಾಧ್ಯತೆ ಇದೆ ಎಂದಿದ್ಧಾರೆ.