ಹೊಸದಿಗಂತ ವರದಿ, ಹಾಸನ:
ನಗರ ಸೇರಿದಂತೆ ಜಿಲ್ಲೆಯ ಸಕಲೇಶಪುರ ಸೇರಿದಂತೆ ವಿವಿಧೆಡೆ ಗುರುವಾರ ಗಾಳಿ ಸಹಿತ ಬಿರುಸಿನ ಮಳೆಯಾದರೆ, ಇನ್ನೂ ಕೆಲವೆಡೆ ಸಾಧರಣ ಮಳೆಯಾಗಿದೆ.
ಹಾಸನ ನಗರದಲ್ಲಿ ಗುರುವಾರ ಮಧ್ಯಾಹ್ನ ಮೊಡಕವಿದ ವಾತವರಣವಿತ್ತು. ನಂತರ ಒಂದು ಗಂಟೆ ಕಾಲ ದಿಢೀರ್ ಒಂದೇ ಭಾರಿ ಬಿರುಸಿನ ಮಳೆ ಸುರಿಯಿತು. ವಿವಿಧ ಕಡೆ ಸಾಧಾರಣ ಮಳೆ ಸುರಿದಿದ್ದು, ಸಂಜೆವರೆಗೂ ತಂಪಿನ ವಾತಾವರಣ ನಿರ್ಮಾಣವಾಗಿತ್ತು. ಅಲ್ಪ ಮಳೆಯಿಂದ ಜಿಲ್ಲೆಯ ರೈತರಿಗೆ ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ. ತೇವಾಂಶ ಕೊರತೆಯಿಂದ ಜೋಳಸೇರಿದಂತೆ ತರಕಾರಿ ಬೆಳೆಗಳು ಒಣಗಲು ಪ್ರಾರಂಭಿಸಿದವು. ಆದರೆ ಬುಧವಾರ ರಾತ್ರಿ ಮತ್ತು ಗುರಿವಾರ ಮಧ್ಯಾಹ್ನ ಸುರಿದ ಮಳೆ ಸ್ವಲ್ಪ ಬೆಳೆಗಳಿಗೆ ಆಸರೆಯಾಗಿದೆ.
ಮಳೆ ಕೊರತೆಯಿಂದ ಬೆಳೆಗಳ ಕುಂಠಿತವಾಗಿದ್ದು, ಇದರಿಂದ ಇಳುವರಿಯು ಕಡಿಮೆಯಾಗುವ ಸಂಭವವಿದೆ. ಈಗಾಗಲೇ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು ಮಳೆ ಕೊರತೆಯಿಂದ ಮತ್ತಷ್ಟು ನಷ್ಟವನ್ನು ಅನುಭವಿಸಬೇಕಾಗಿದೆ. ಇದೇರೀತಿ ಉತ್ತಮ ಮಳೆಯಾದರೆ ಬೆಳೆಗಳಿಗೆ ಅನುಕೂಲವಾಗಲಿದೆ ಎಂದು ರೈತರು ಹೇಳಿದರು.
ಇನ್ನೂ ನಗರದ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ರಸ್ತೆಗೆ ಹರಿಯಿತು. ರಸ್ತೆ ಮೇಲೆ ಓಡಾಡಲು ವಾಹನ ಸವಾರರು ಪರದಾಡಬೇಕಾಯಿತು. ಅಲ್ಲದೆ ವಿವಿಧ ವ್ಯಾಪಾರಿಗಳಿಗೆ ದಿಢೀರ್ ಮಳೆಯಿಂದ ಅಸ್ತವ್ಯಸ್ತವಾಯಿತು. ಅಲ್ಲದೆ ವಿವಿಧ ಬಡಾವಣೆಯ ಮಣ್ಣಿನ ರಸ್ತೆಗಳು ಕೂಡ ಮಳೆಯಿಂದ ಕೆಸರು ಗದ್ದೆಗಳಂತೆ ಆಯಿತು. ಮಧ್ಯಾಹ್ನದವೇಳೆ ಆಗಿದ್ದರಿಂದ ವಿಧ್ಯಾರ್ಥಿಗಳು, ಸಾರ್ವಜನಿಕರು ಅಂಗಡಿಮುಗ್ಗಟ್ಟುಗಳಲ್ಲಿ ನಿಂತು ಆಶ್ರಯಪಡೆದು ನಂತರ ತಮ್ಮ ಕೆಲಸಗಳತ್ತ ತೆರಳಿದರು.