ದಿಗಂತ ವರದಿ ಅಂಕೋಲಾ:
ಭಾರೀ ಮಳೆಯಿಂದಾಗಿ ತಾಲೂಕಿನ ಶಿರೂರು ಗುಡ್ಡ ಕುಸಿತದ ಘಟನೆ ಹಸಿಯಾಗಿರುವಾಗಲೇ ಕೇರಳ ರಾಜ್ಯದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲೂ ಮತ್ತೆ ಮಳೆ ಅಬ್ಬರಿಸುವ ಮುನ್ನೆಚ್ಚರಿಕೆ ನೀಡಲಾಗಿದೆ.
ಜುಲೈ ತಿಂಗಳ ಆರಂಭದಿಂದಲೂ ನಿರಂತರವಾಗಿ ಸುರಿಯುತ್ತಿದ್ದ ಮಳೆ ತಿಂಗಳ ಮಧ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಕಾರಣ ಜಿಲ್ಲೆಯಲ್ಲಿ ಬಹಳಷ್ಟು ಕಡೆಗಳಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸಲು ಕಾರಣವಾಯಿತಲ್ಲದೇ ಅಂಕೋಲಾ ತಾಲೂಕಿನ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದ ದುರಂತ ಸುಮಾರು 11 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅತಿ ದೊಡ್ಡ ದುರ್ಘಟನೆಗಳಲ್ಲಿ ಒಂದಾಗಿ ಇಡೀ ದೇಶದ ಗಮನ ಸೆಳೆಯುವಂತಾಯಿತು.
ಸುಮಾರು 15 ದಿನಗಳಾದರೂ ಈ ದುರ್ಘಟನೆಯ ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗಿ ಮುಗಿಯದಿದ್ದರೂ ಮಳೆಯ ಅಬ್ಬರ ಕಡಿಮೆ ಆಗಿರುವುದರಿಂದ ಈ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಇದೀಗ ಕೇರಳದ ವಯನಾಡ್ ಸುತ್ತ ಮುತ್ತ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು ಭೌಗೋಳಿಕ ಸಾಮ್ಯತೆ ಇರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮತ್ತೆ ಭಾರೀ ಮಳೆ ಸುರಿಯುವ ಕುರಿತು ಭಾರತೀಯ ಹವಾಮಾನ ಇಲಾಖೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮುನ್ಸೂಚನೆ ನೀಡಲಾಗಿದೆ.