ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಜಿಲ್ಲಾ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಜೋರು ಮಳೆಯಿಂದ ಹಾನಿಗೆ ಒಳಗಾಗಿರುವ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ ಪರಿಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸುವಂತೆ ಜಿಲ್ಲಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಜೊತೆಗೆ ಈ ಬಗ್ಗೆ ಸಮಗ್ರ ಅವಲೋಕನ ನಡೆಸಲು , ಮೇ 30, 31 ರಂದು DC , CEO ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯನ್ನು ಕರೆಯುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ 170 ತಾಲ್ಲೂಕುಗಳನ್ನು ಪ್ರವಾಹ/ಭೂಕುಸಿತಕ್ಕೆ ಗುರಿಯಾಗುವ ತಾಲ್ಲೂಕುಗಳೆಂದು ಗುರುತಿಸಲಾಗಿದ್ದು, ಮುಂಜಾಗ್ರತೆಯಾಗಿ 2,296 ಕಾಳಜಿ/ಆಶ್ರಯ ತಾಣಗಳನ್ನು ಗುರುತಿಸಲಾಗಿದೆ.