ಉತ್ತರಾಖಂಡದಲ್ಲಿ ಭಾರೀ ಮಳೆಯ ಮುನ್ಸೂಚನೆ: ಚಾರ್‌ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಪ್ರಿಲ್ 30ರಂದು ಆರಂಭವಾದ ಚಾರ್‌ಧಾಮ್ ಯಾತ್ರೆಗೆ ಗಣನೀಯ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರೂ, ಡೆಹ್ರಾಡೂನ್ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದ ಹಿನ್ನೆಲೆ, ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.

ಡೆಹ್ರಾಡೂನ್ ಹವಾಮಾನ ಕೇಂದ್ರದ ಭಾರೀ ಮಳೆಯ ಎಚ್ಚರಿಕೆ ಹಾಗೂ ಗರ್ವಾಲ್ ಆಯುಕ್ತರ ನಿರ್ದೇಶನದಂತೆ, ಚಾರ್‌ಧಾಮ್ ಯಾತ್ರೆಯನ್ನು ಮುಂದಿನ 24 ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಕ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಸಂಬಂಧಿತ ಎಸ್‌ಡಿಎಂಗಳಿಗೆ ಸೂಚನೆ ನೀಡಲಾಗಿದೆ.

ಬದ್ರಿನಾಥ ಮತ್ತು ಕೇದಾರನಾಥಕ್ಕೆ ತೆರಳುತ್ತಿರುವ ಯಾತ್ರಾರ್ಥಿಗಳನ್ನು ಶ್ರೀನಗರ ಮತ್ತು ರುದ್ರಪ್ರಯಾಗ ನಲ್ಲಿ ತಡೆಯಲಾಗುತ್ತಿದೆ. ಅದೇ ರೀತಿ, ಯಮುನೋತ್ರಿ ಮತ್ತು ಗಂಗೋತ್ರಿಗೆ ತೆರಳುತ್ತಿರುವ ಯಾತ್ರಾರ್ಥಿಗಳನ್ನು ವಿಕಾಸನಗರ ಮತ್ತು ಬಾರ್ಕೋಟ್ ನಲ್ಲಿ ತಡೆಹಿಡಿಯಲಾಗುತ್ತಿದೆ ಎಂದು ಗರ್ವಾಲ್ ಆಯುಕ್ತ ವಿನಯ್ ಶಂಕರ್ ಪಾಂಡೆ ಅವರು ತಿಳಿಸಿದ್ದಾರೆ.

ಕೇದಾರನಾಥಕ್ಕೆ ತೆರಳುವ ಪ್ರಮುಖ ಮಾರ್ಗಗಳಲ್ಲಿ ಒಂದಾದ ನಂದಪ್ರಯಾಗ ಮತ್ತು ಭನೇರೋಪಾನಿ ಬಳಿ ರಾಷ್ಟ್ರೀಯ ಹೆದ್ದಾರಿ, ಮಣ್ಣಿನ ಅವಶೇಷಗಳಿಂದ ಮುಚ್ಚಿ ಹೋಗಿದ್ದು, ಸಾಗಣೆ ಸ್ಥಗಿತವಾಗಿದೆ. ರುದ್ರಪ್ರಯಾಗದಲ್ಲಿ ನಿರಂತರ ಭೂಕುಸಿತಗಳಿಂದ ಸೋನ್‌ಪ್ರಯಾಗ-ಮುಂಕಟಿಯಾ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ.ಸೋನ್‌ಪ್ರಯಾಗ್ ಮತ್ತು ಗೌರಿಕುಂಡ್ ಪ್ರದೇಶದಲ್ಲಿ ಮಾರ್ಗವನ್ನು ಭಾಗಶಃ ತೆರವುಗೊಳಿಸುವವರೆಗೆ ತಾತ್ಕಾಲಿಕ ನಿಲುಗಡೆ ಕ್ರಮಗಳು ಜಾರಿಗೊಂಡಿವೆ. ಅಧಿಕಾರಿಗಳು ಸ್ಥಳೀಯ ಸಾಗಣೆಯನ್ನು ಈಗ ಎಚ್ಚರಿಕೆಯಿಂದ ಮತ್ತು ನಿಯಂತ್ರಿತ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ.

ರಾಜ್ಯಾದ್ಯಂತ ಭಾರೀ ಮಳೆ ಮುಂದುವರಿಯಲಿದ್ದು, ಇನ್ನಷ್ಟು ಭೂಕುಸಿತಗಳು ಮತ್ತು ರಸ್ತೆ ಬಂದ್ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹೀಗಾಗಿ, ಹವಾಮಾನ ಪರಿಸ್ಥಿತಿ ಸ್ಥಿರವಾಗುವವರೆಗೆ ಯಾತ್ರಾರ್ಥಿಗಳಿಗೆ ತಮ್ಮ ಪ್ರಯಾಣ ಮುಂದುವರಿಸದಂತೆ ಸರ್ಕಾರವು ಸೂಚನೆ ನೀಡಿದೆ.

ಡೆಹ್ರಾಡೂನ್ ಹವಾಮಾನ ಇಲಾಖೆಯ ವರದಿ ಪ್ರಕಾರ, ಡೆಹ್ರಾಡೂನ್, ತೆಹ್ರಿ, ಪೌರಿ, ಹರಿದ್ವಾರ, ಚಂಪಾವತ್, ನೈನಿತಾಲ್ ಹಾಗೂ ಉಧಮ್ ಸಿಂಗ್ ನಗರ ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಂಭವವಿದೆ. ಹಿಮಾಲಯದ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯೊಂದಿಗೆ ಗುಡುಗು, ಮಿಂಚಿನ ಮುನ್ಸೂಚನೆ ನೀಡಲಾಗಿದೆ.

ಡೆಹ್ರಾಡೂನ್, ತೆಹ್ರಿ, ಪೌರಿ, ಹರಿದ್ವಾರ, ನೈನಿತಾಲ್, ಚಂಪಾವತ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ, ಬಾಗೇಶ್ವರ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!