ಹೊಸದಿಗಂತ ವರದಿ ಅಂಕೋಲಾ:
ಎರಡು ದಿನಗಳ ಕಾಲ ಸತತವಾಗಿ ಸುರಿದ ಭಾರೀ ಮಳೆಯ ಕಾರಣ ಕಾರವಾರ ಅಂಕೋಲಾ ರಸ್ತೆಯ ಅರ್ಗಾ ನೌಕಾನೆಲೆ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.
ನೌಕಾನೆಲೆ ಪ್ರದೇಶದಿಂದ ಸಮುದ್ರಕ್ಕೆ ನೀರು ಹರಿದು ಹೋಗುವ ಕಾಲುವೆಗಳನ್ನು ಮುಚ್ಚಿರುವುದರಿಂದ ಗುಡ್ಡಗಾಡು ಪ್ರದೇಶಗಳಿಂದ ಹರಿದು ಬರುವ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲುವಂತಾಗಿದ್ದು ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀರಿನ ಪ್ರಮಾಣ ಕಡಿಮೆ ಇರುವ ಭಾಗದಿಂದ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಒಂದು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಇನ್ನೊಂದು ಬದಿಯಿಂದ ವಾಹನಗಳಿಗೆ ಅವಕಾಶ ಮಾಡಿಕೊಡುವ ಪ್ರಕ್ರಿಯೆ ನಡೆದಿದೆ. ಬೆಳಿಗ್ಗೆ ನೀರಿನಲ್ಲಿ ಸಂಚರಿಸಿದ ಹತ್ತಾರು ದ್ವಿಚಕ್ರ ವಾಹನಗಳ ಬಿಡಿ ಭಾಗಗಳಲ್ಲಿ ನೀರು ಪ್ರವೇಶಿಸಿ ವಾಹನಗಳು ಕೆಟ್ಟು ದುರುಸ್ಥಿಗೆ ನೀಡುವಂತಾಗಿದೆ.
ಬಿಣಗಾದಲ್ಲಿ ಸಹ ನೀರು ಹರಿದು ಹೋಗುವ ಕಾಲುವೆಗಳ ವ್ಯವಸ್ಥೆ ಇಲ್ಲದೇ ಕೃಷಿ ಭೂಮಿ ಮುಳುಗಿ ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗುವಂತಾಗಿದೆ ಬಿಣಗಾ ಮಹಾಲಸಾವಾಡಾ, ಒಕ್ಕಲಕೇರಿ ಭಾಗಗಳ ಮನೆಗಳಿಗೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಗೋಕರ್ಣದಲ್ಲಿ ಬಿರುಗಾಳಿಯಿಂದಾಗಿ ಮಹಾಬಲೇಶ್ವರ ದೇವಾಲಯದ ಅನ್ನ ದಾಸೋಹ ಭೋಜನ ಶಾಲೆಯ ಮೇಲೆ ತೆಂಗಿನ ಮರ ಮುರಿದು ಬಿದ್ದು ಮೇಲ್ಛಾವಣಿಗೆ ಹಾನಿ ಸಂಭವಿಸಿದೆ.
ಗುರುವಾರ ಬೆಳಿಗ್ಗೆಯಿಂದ ಮಳೆಯ ವೇಗ ತಗ್ಗಿದ್ದು ಬಿರುಗಾಳಿ ಹೊರತುಪಡಿಸಿದರೆ ಶಾಂತ ಸ್ವರೂಪವಾಗಿ ಪುನರ್ವಸು ಮಳೆಯ ಪ್ರವೇಶ ಆಗಿದ್ದರೂ ಕಳೆದ ಮೂರು ದಿನಗಳಿಂದ ಸುರಿದ ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಟ್ಟ ಗುಡ್ಡಗಳಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬರತೊಡಗಿದ್ದು ಅಸಮರ್ಪಕ ಕಾಲುವೆಗಳು ಮತ್ತು ನೀರು ಸಮುದ್ರ ಸೇರಲು ಉಂಟಾಗಿರುವ ಅಡ್ಡಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ಸಮಸ್ಯೆಗಳಿಗೆ ಕಾರಣವಾಗಿದ್ದು ಮನೆ,ಅಂಗಡಿ, ಕೃಷಿ ಭೂಮಿಗಳಿಗೆ ನೀರು ತುಂಬುವಂತಾಗಿದೆ.