ಹೊಸದಿಗಂತ ವರದಿ ಬೆಳಗಾವಿ:
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲೂ ಮುಂಗಾರು ಮಳೆ ಮುಗಿಲು ಮುಟ್ಟಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನ ಧಗೆ ಹಾಗೂ ಉಷ್ಣಾಂಶದಿಂದ ತತ್ತರಿಸಿದ್ದ ಕುಂದಾನಗರಿಯ ಜನತೆಗೆ ಮಳೆರಾಯ ತಂಪೆರೆದಿದ್ದಾನಾದರೂ, ಬಿಟ್ಟುಬಿಡದೆ ಸುರಿಯುತ್ತಿರುವ ಗಾಳಿ-ಮಳೆ ಸಾರ್ವಜನಿಕರ ದೈನಂದಿನ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.
ಧರೆಗುರುಳಿದ ಮರಗಳು:
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಮಳೆಯ ರಭಸಕ್ಕೆ ಅಲ್ಲಲ್ಲಿ ಬೃಹತ್ ಗಿಡಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗುರುಳಿವೆ. ಇದರಿಂದಾಗಿ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ಮತ್ತು ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕುವಂತಾಯಿತು. ಪಾಲಿಕೆ ಸಿಬ್ಬಂದಿ ಹಾಗೂ ಮುನ್ನೆಚ್ಚರಿಕೆ ತಂಡಗಳು ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪ್ರಮುಖ ವೃತ್ತಗಳು ಜಲಾವೃತ:
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಹಳ್ಳ-ಕೊಳ್ಳಗಳಂತಾಗಿದ್ದು, ಅಪಾರ ಪ್ರಮಾಣದ ನೀರು ರಸ್ತೆಯ ಮೇಲೆ ಹರಿಯುತ್ತಿದೆ.
ನಗರದ ಪ್ರಮುಖ ಕೇಂದ್ರಗಳಾದ ರಾಣಿ ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಖಡೇಬಜಾರ ಹಾಗೂ ಹಳೆ ಪಿಬಿ ರಸ್ತೆ, ಗಾಂಧಿ ನಗರ, ಸದಾಶಿವ ನಗರ, ಮಹಾಂತೇಶ ನಗರ, ಸಹ್ಯಾದ್ರಿ ನಗರ ಮತ್ತು ಶಿವಾಜಿ ನಗರ
ಕ್ಯಾಂಪ್ ಪ್ರದೇಶ, ಆಜಂ ನಗರ, ವಡಗಾವಿ, ಶಹಾಪುರ, ಹಿಂಡಲಗಾ ಹಾಗೂ ಕಾಕತಿ ವೇಸ್ ಗ್ಲೋಬ್ ಚಿತ್ರಮಂದಿರದ ಆವರಣ ಸೇರಿದಂತೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಆಶ್ರಯ ಬೇಡಿದ ಸಾರ್ವಜನಿಕರು:
ಹಠಾತ್ತನೆ ಬಿಟ್ಟುಬಿಡದೆ ಸುರಿದ ಮಹಾಮಳೆಗೆ ವಿವಿಧ ಕೆಲಸಗಳ ನಿಮಿತ್ತ ನಗರಕ್ಕೆ ಬಂದಿದ್ದ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಬೆಚ್ಚಿಬಿದ್ದರು. ವರುಣನ ರೌದ್ರಾವತಾರಕ್ಕೆ ಹೆದರಿದ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ರಸ್ತೆ ಪಕ್ಕದ ಕಟ್ಟಡಗಳು, ಹೋಟೆಲ್ಗಳು, ಬಸ್ ನಿಲ್ದಾಣಗಳು ಹಾಗೂ ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದರು. ಸಾರ್ವಜನಿಕರ ಓಡಾಟ ಸ್ಥಗಿತಗೊಂಡಿದ್ದರಿಂದ ನಗರದ ಮಾರುಕಟ್ಟೆ ಪ್ರದೇಶಗಳು ಜನರಿಲ್ಲದೆ ಘಾಸಿಯಾಗಿದ್ದವು.
ರೈತಾಪಿಗೆ ವರವಾದ ಮಳೆ:
ಭತ್ತ ಬಿತ್ತನೆ ಹಾಗೂ ನಾಟಿ ಮಾಡುವ ಕಾರ್ಯಕ್ಕೆ ರೈತಾಪಿ ವರ್ಗವು ಭರದಿಂದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಒಂದೆಡೆ ನಗರ ಪ್ರದೇಶದಲ್ಲಿ ಮಳೆಯಿಂದಾಗಿ ಜನಜೀವನ ತತ್ತರಿಸಿದ್ದರೆ, ಇನ್ನೊಂದೆಡೆ ಬೆಳಗಾವಿ ಗ್ರಾಮೀಣ ಭಾಗದ ರೈತರಲ್ಲಿ ಈ ಮಳೆ ಹೊಸ ಹರ್ಷ ತಂದಿದೆ. ಮುಂಗಾರು ಮಳೆಯ ಸಕಾಲಿಕ ಆಗಮನದಿಂದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಗ್ರಾಮೀಣ ಭಾಗದ ಕರಾವಳಿ ಮತ್ತು ಬಯಲು ಸೀಮೆಯ ಜಮೀನುಗಳಲ್ಲಿ ಭತ್ತ ಬಿತ್ತನೆ ಹಾಗೂ ನಾಟಿ ಮಾಡುವ ಕಾರ್ಯ ಅತ್ಯಂತ ಚುರುಕಾಗಿ ಸಾಗಿದೆ. ಮಳೆಯನ್ನೇ ನಂಬಿದ್ದ ಅನ್ನದಾತರು ಸದ್ಯ ಸಂತಸ ಗೊಂಡಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ಇದೇ ರೀತಿ ಮಳೆ ಮುಂದುವರಿಯುವ ಮುನ್ಸೂಚನೆ ಇದ್ದು, ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬರದೇ ಮುನ್ನೆಚ್ಚರಿಕೆ ವಹಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ.



