ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ನಡುವೆ ಆಗ್ನೇಯ ದೆಹಲಿಯ ಜೈತ್ಪುರ ಪೊಲೀಸ್ ಠಾಣೆ ಪ್ರದೇಶದ ಕೊಳಚೆ ಪ್ರದೇಶದಲ್ಲಿ ಸ್ಮಶಾನದ 100 ಅಡಿ ಉದ್ದದ ಗೋಡೆ ಕುಸಿದು 8 ಜನ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.
ಶನಿವಾರ ಹರಿ ನಗರ ಗ್ರಾಮದ ಹಿಂದಿನ ಕೊಳಚೆ ಪ್ರದೇಶದ ಮೇಲೆ ಸ್ಮಶಾನದ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಮುತ್ತು ಅಲಿ (45), ರಬಿಬುಲ್ (30), ಶಬಿಬುಲ್ (30), ರುಬಿನಾ (25), ಡಾಲಿ (25), ಹಶಿಬುಲ್, ರುಖ್ಸಾನಾ (6) ಮತ್ತು ಹಸೀನಾ (7) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಏಮ್ಸ್ ಟ್ರಾಮಾ ಸೆಂಟರ್ ಮತ್ತು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿ ಪೊಲೀಸರು, ಅಗ್ನಿಶಾಮಕ ದಳ, ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ರಾಷ್ಟ್ರ ರಾಜಧಾನಿಯಲ್ಲಿ ಧಾರಾಕಾರ ಮಳೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆ ಹಾಗೂ ವಾಯು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ದೆಹಲಿ – ಎನ್ಸಿಆರ್ ನ ಹೆಚ್ಚಿನ ಭಾಗಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.