ಹೊಸದಿಗಂತ ವರದಿ ಯಾದಗಿರಿ:
ಗಿರಿ ಜಿಲ್ಲೆಯಲ್ಲಿ ಮುಂದುವರಿದ ವರುಣಾರ್ಭಟ. ಜಿಲ್ಲಾದ್ಯಂತ ಸೋಮವಾರ ತಡ ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ.
ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಸೇತುವೆಗಳು ಮುಳುಗಡೆಯಾಗಿದ್ದು, ಜನ ಸಂಪರ್ಕ ಕಟ್ ಆಗಿದೆ. ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಿದೆ.
ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದ್ದು, ನದರಿಂದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ನದಿ ನೀರು ರಭಸವಾಗಿ ಹರಿಯುತ್ತಿದ್ದು, ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆ ಮುಳುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ.
ಈ ಸೇತುವೆ ಮುಳಿಗಡೆಯಾದರೆ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ರಾಜ್ಯಗಳಿಗೆ ರಸ್ತೆ ಸಂಪರ್ಕ ಕಡಿತವಾಗಲಿದೆ. ಇನ್ನೂ ಪ್ರವಾಹ ಪರಿಸ್ಥಿತಿ ಕಾರಣ ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಜನತೆ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಸೂಚಿಸಿದೆ.