ಹೊಸದಿಗಂತ ವರದಿ,ಕುಶಾಲನಗರ:
ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ ಗಂಟೆ ಗಂಟೆಗೂ ಹೆಚ್ಚಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ನದಿಗೆ 25ಸಾವಿರ ಕ್ಯುಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ.
ಕಳೆದ ಎರಡು ವರ್ಷಗಳ ಬಳಿಕ ಇದೀಗ ಇಷ್ಟು ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಕಳೆದ ಎರಡೂ ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಶನಿವಾರ ಮಳೆ ಮತ್ತಷ್ಟು ಬಿರುಸುಗೊಂಡ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ 23 ಸಾವಿರ ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಅಣೆಕಟ್ಟೆಯ ಕ್ರೆಸ್ಟ್’ಗೇಟ್’ಗಳ ಮೂಲಕ 23 ಸಾವಿರ ಮತ್ತು ವಿದ್ಯುತ್ ಘಟಕದ ಮೂಲಕ 2 ಸಾವಿರ ಕ್ಯುಸೆಕ್ಸ್ ನೀರನ್ನು ನದಿಗೆ ಮತ್ತು ಮುಖ್ಯ ನಾಲೆಗೆ 350 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತದೆ ಎಂದು ಕಾರ್ಯಪಾಲಕ ಅಭಿಯಂತರ ಐ ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ನದಿಗೆ ಹೆಚ್ಚು ನೀರು ಹರಿಸುವ ಸಂದರ್ಭದಲ್ಲಿ ತಗ್ಗುಪ್ರದೇಶದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೈರನ್ ಮೊಳಗಿಸಿ ಮುನ್ಸೂಚನೆ ನೀಡಲಾಗಿದೆ.
ಈ ಸಂದರ್ಭ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಅಣೆಕಟ್ಟೆಯ ಉಸ್ತುವಾರಿ ಇಂಜಿನಿಯರ್ ಸೌಮ್ಯ ರಾಜ್, ಡಿ.ಡಿ. ಕಿರಣ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.