ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ, 471 ರಸ್ತೆಗಳು ಸ್ಥಗಿತಗೊಂಡಿದ್ದು, ಶಾಲಾ, ಕಾಲೇಜ್ ಗಳಿಗೆ ರಜೆ ಘೋಷಿಸಲಾಗಿದೆ. ಭೂಕುಸಿತದಿಂದ ನವವಿವಾಹಿತ ದಂಪತಿ ಸಾವನ್ನಪ್ಪಿದ್ದು, ಸಾಮಾನ್ಯ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಶಿಮ್ಲಾ, ಕಾಂಗ್ರಾ, ಚಂಬಾ, ಸಿರ್ಮೌರ್ ಮತ್ತು ಮಂಡಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ‘ರೆಡ್’ ಅಲರ್ಟ್ ಘೋಷಿಸಿದೆ.
ಚಂಬಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ, ಸುತನ್ಹ್ ಗ್ರಾಮದ ಮನೆಯ ಮೇಲೆ ಬಂಡೆಯೊಂದು ಉರುಳಿ ಬಿದ್ದಿದೆ. ಘಟನೆಯಲ್ಲಿ ಇತ್ತೀಚೆಗೆ ವಿವಾಹವಾದ ಸನ್ನಿ ಮತ್ತು ಪಲ್ಲು ಎಂದು ದಂಪತಿ ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದ ಹಲವು ಕಡೆ ಭೂಕುಸಿತ ಸಂಭವಿಸಿದ್ದು, ರಸ್ತೆಗಳು ಬಂದ್ ಆಗಿವೆ. ಹೀಗಾಗಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.