ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ. ಇದರಿಂದ ನದಿಗಳು ತುಂಬಿ ಹರಿಯುತ್ತಿದ್ದು, ಭೂಕುಸಿತ ಉಂಟಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಾಧಿಯಲ್ಲಿ ಮಳೆಯ ಅವಲೋಕನ ನಡೆಸಿದರು. ಹಿಮಾಚಲ ಪ್ರದೇಶ ರಾಜ್ಯವೂ ಜಲಾವೃತಗೊಂಡಿದ್ದು, ಬಿಲಾಸ್ಪುರ್, ಸೋಲನ್, ಶಿಮ್ಲಾ, ಸಿರ್ಮೌರ್, ಉನಾ, ಹಮೀರ್ಪುರ್, ಮಂಡಿ, ಕುಲು ಮತ್ತಿತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಆ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆ ಮಳೆಯಿಂದ ನಲುಗಿದೆ. ನಿರಂತರ ಮಳೆಯಿಂದಾಗಿ ಬಿಯಾಸ್ ಮತ್ತು ಉಹಲ್ ನದಿಗಳು ತುಂಬಿ ಹರಿಯುತ್ತಿವೆ. ಬಿಯಾಸ್-ಸಟ್ಲೆಜ್ ಲಿಂಕ್ ಯೋಜನೆಯ ಪಾಂಡೋಹ್ ಅಣೆಕಟ್ಟಿನ ನೀರನ್ನು ಹರೊಬಿಡಲಾಗಿದೆ. ಬಿಯಾಸ್ ನದಿಯ ಮೇಲೆ ದವಾಡ ಸೇತುವೆ ಪ್ರವಾಹದಿಂದ ಕೊಚ್ಚಿ ಹೋಗಿದೆ. ಅದೇ ಸಮಯದಲ್ಲಿ, 100 ವರ್ಷಗಳಷ್ಟು ಹಳೆಯದಾದ ಪಾಂಡೋ ಸೇತುವೆ ಕೂಡ ಪ್ರವಾಹಕ್ಕೆ ಕೊಚ್ಚಿಹೋಗಿದೆ. ಮಂಡಿ ನಗರದ ಬಿಯಾಸ್-ಸುಕೇತಿಖಾಡ್ ಸಂಗಮದಲ್ಲಿರುವ ಐತಿಹಾಸಿಕ ಪಂಚವಕ್ತ್ರ ದೇವಾಲಯದ ಆವರಣಕ್ಕೂ ಬಿಯಾಸ್ ನದಿ ನೀರು ನುಗ್ಗಿದೆ.
ಮಂಡಿ ಜಿಲ್ಲೆಯ ಬಿಯಾಸ್ ನದಿಯ ರಭಸಕ್ಕೆ ಆಟೋ-ಬಂಜಾರ್ ಸಂಪರ್ಕಿಸುವ 40 ವರ್ಷಗಳ ಹಳೆಯ ಸೇತುವೆ ಕೊಚ್ಚಿಹೋಗಿದೆ. ಭಾರೀ ಮಳೆ ಮತ್ತು ತೀವ್ರ ಜಲಾವೃತದಿಂದಾಗಿ ಶಿಮ್ಲಾ-ಕಲ್ಕಾ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಭಾರೀ ಮಳೆಯಿಂದಾಗಿ ಕೋಟಿ ಸನ್ವಾರ ರೈಲು ನಿಲ್ದಾಣಗಳ ನಡುವಿನ ರೈಲು ಹಳಿ ನೀರಿನಲ್ಲಿ ಮುಳುಗಿದೆ. ಭಾರೀ ಮಳೆಯಿಂದಾಗಿ ಜನರು ಮನೆಯಲ್ಲಿಯೇ ಇರಬೇಕಾಗಿ ಹಿಮಾಚಲ ಪ್ರದೇಶದ ಸಿಎಂ ಮನವಿ ಮಾಡಿದರು. ಪ್ರವಾಹ ಪೀಡಿತ ಪ್ರದೇಶಗಳ ರಾಜಕಾಲುವೆ, ಚರಂಡಿಗಳ ಬಳಿ ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿ ಪ್ರವಾಹ ಸಂತ್ರಸ್ತರಿಗೆ ಕೂಡಲೇ ನೆರವು ನೀಡಬೇಕು ಎಂದು ಸೂಚಿಸಿದರು.